ಕೋಲ್ಕತ್ತ: ಪಡಿತರ ವ್ಯವಸ್ಥೆ ಹಗರಣ ಪ್ರಕರಣದಲ್ಲಿ ತನ್ನ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಈ.ಡಿ.) ಶನಿವಾರ ಪಶ್ಚಿಮ ಬಂಗಾಳದಾದ್ಯಂತ ಒಂಭತ್ತು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ.
ಪ್ರಕರಣದಲ್ಲಿ ನಿರಂಜನ ಚಂದ್ರ ಸಹಾ ಮತ್ತು ಇತರರೊಂದಿಗೆ ನಂಟು ಹೊಂದಿರುವ ಪೂರೈಕೆದಾರರು ಮತ್ತು ರಫ್ತುದಾರರಿಗೆ ಸೇರಿದ ಕೋಲ್ಕತಾ, ಬರ್ದ್ವಾನ್ ಮತ್ತು ಹಬ್ರಾಗಳಲ್ಲಿಯ ವಿವಿಧಡೆಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಲ್ಯಾಣ ಯೋಜನೆಗಳಿಗಾಗಿ ಮೀಸಲಾಗಿದ್ದ ಪಡಿತರ ಗೋದಿಯನ್ನು ಭಾರೀ ಪ್ರಮಾಣದಲ್ಲಿ ಅನ್ಯ ಉದ್ದೇಶಕ್ಕೆ ಬಳಸಲಾಗಿದೆ ಎಂದು ಆರೋಪಿಸಿ ಕಸ್ಟಮ್ಸ್ ಉಪ ಆಯುಕ್ತರು ನೀಡಿದ್ದ ದೂರಿನ ಮೇರೆಗೆ ಪ.ಬಂಗಾಳ ಪೋಲಿಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಇದನ್ನು ಆಧರಿಸಿ ಈ.ಡಿ.ತನಿಖೆೆಯನ್ನು ನಡೆಸುತ್ತಿದೆ.
ಆರೋಪಿಗಳು ಅಗ್ಗದ ದರಗಳಲ್ಲಿ ಖರೀದಿಸಿದ್ದ ಪಡಿತರ ಗೋದಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಅಧಿಕ ದರಗಳಲ್ಲಿ ಮಾರಾಟ ಮಾಡಿದ್ದರು ಎನ್ನುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಈ.ಡಿ.ಹೇಳಿದೆ.

