ಕಾಸರಗೋಡು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಗುಪ್ತಚರ ವಿಭಾಗ ಹಮ್ಮಿಕೊಂಡಿರುವ ಅಪರೇಷನ್ ಹಾಟ್‍ಸ್ಪೋಟ್, ಅಪರೇಷನ್ ಹಂಟ್‍ನಂತೆ ವ್ಯಾಪಕ ಕಾರ್ಯಾಚರಣೆಯನ್ವಯ ರೈಲು ನಿಲ್ದಾಣಗಳು, ಬಸ್ ನಿಲ್ದಾಣ ಒಳಗೊಂಡಂತೆ ವಿವಿಧ ಕೇಂದ್ರಗಳಲ್ಲಿ ಮಾ. 16ರಿಂದ ಏ. 2ರ ವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 61 ಅಬಕಾರಿ ಪ್ರಕರಣಗಳು, 52 ಮಾದಕದ್ರವ್ಯ ಪ್ರಕರಣಗಳು ಮತ್ತು ನಿಷೇಧಿತ ತಂಬಾಕು ಉತ್ಪನ್ನ ಸೇರಿದ 47 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಒಟ್ಟು 27.85 ಲೀಟರ್ ಅಕ್ರಮ ಮದ್ಯ, 1560 ಲೀಟರ್ ಮದ್ಯತಯಾರಿಗಾಗಿ ಸಂಗ್ರಹಿಸಿಟ್ಟಿದ್ದ ಹುಳಿರಸ, 195.52 ಲೀಟರ್ ವಿದೇಶಿ ಮದ್ಯ, 53.66 ಲೀಟರ್ ಅನಧಿಕೃತ ಮದ್ಯ, 8.45 ಲೀಟರ್ ಬಿಯರ್ ಮತ್ತು 8.370 ಲೀಟರ್ ಗೋವಾ ನಿರ್ಮಿತ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, 36.078 ಕಿಲೋ ಗಾಂಜಾ, 1362 ಗಾಂಜಾ ಸಸಿಗಳು, 328.404 ಗ್ರಾಂ ಮೆಥಾಫೆಟಮಿನ್, 0.330 ಗ್ರಾಂ ಎಂಡಿಎಂಎ, 2.54 ಗ್ರಾಂ ಬ್ರೌನ್ ಶುಗರ್, 2.06 ಗ್ರಾಂ ಹ್ಯಾಶಿಶ್ ಆಯಿಲ್ ಮತ್ತು 54.06 ಕಿಲೋ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ.
ಇದರೊಂದಿಗೆ ಅನಧಿಕೃತವಾಗಿ ಸಾಗಿಸುತ್ತಿದ್ದ 62.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಅಬಕಾರಿ ಪ್ರಕರಣಗಳಲ್ಲಿ 39 ಆರೋಪಿಗಳು ಮತ್ತು ಮಾದಕದ್ರವ್ಯ ಪ್ರಕರಣಗಳಲ್ಲಿ 49 ಆರೋಪಿಗಳನ್ನು ಬಂಧಿಸಿ, 7 ವಾಹನಗಳನ್ನೂ ವಶಪಡಿಸಲಾಗಿದೆ. ಕೇರಳದಲ್ಲಿ ನಿಷೇಧಿತ ತಂಬಾಕು ಉತ್ಪನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ 5400 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಗುಪ್ತಚರ ವಿಭಾಗ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

