ನವದೆಹಲಿ: ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಂಪರೆಯನ್ನು ಕೆಲವು ಶಕ್ತಿಗಳು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನನ್ನ ಕೊನೆಯ ಉಸಿರು ಇರುವವರೆಗೂ ಬಾಬಾಸಾಹೇಬ್ ಅವರ ಆದರ್ಶಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದು ಕಾಂಗ್ರೆಸ್ ಪಕ್ಷ ಅವರಿಗೆ ಗೌರವ ಸಲ್ಲಿಸಿದೆ. ಸಂವಿಧಾನವು ಇಂದು ಪಿತೂರಿ ದಾಳಿಯನ್ನು ಎದುರಿಸುತ್ತಿದೆ ಮತ್ತು ಅಂಬೇಡ್ಕರ್ ಅವರು ಪ್ರತಿಪಾದಿಸಿದ ಪ್ರತಿಯೊಂದು ತತ್ವವನ್ನು ರಕ್ಷಿಸಲು ನಾವು ಎದ್ದು ನಿಲ್ಲಬೇಕು ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
'ಭಾರತಕ್ಕೆ ನೈತಿಕ ಮತ್ತು ಸಾಂವಿಧಾನಿಕ ಆತ್ಮವನ್ನು ನೀಡಿದ ದಾರ್ಶನಿಕನಿಗೆ ಅತ್ಯಂತ ಗೌರವದಿಂದ ನಮಸ್ಕರಿಸುತ್ತೇವೆ. ಬಾಬಾಸಾಹೇಬ್ ಭಾರತದ ಸಂವಿಧಾನದ ಶಿಲ್ಪಿ ಮಾತ್ರವಲ್ಲ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಕ್ಕಾಗಿ ನಿರಂತರ ಯೋಧರಾಗಿದ್ದರು. ಭಾರತದ ಕಲ್ಪನೆಯನ್ನು ವ್ಯಾಖ್ಯಾನಿಸುವುದು ಅವರ ಮೌಲ್ಯಗಳಾಗಿದ್ದವು' ಎಂದು ಖರ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
'ನಾವು ಅಮಬೇಡ್ಕರ್ ಅವರನ್ನು ಕೇವಲ ಸ್ಮರಿಸುವುದಲ್ಲ. ಅವರು ಪ್ರತಿಪಾದಿಸಿದ ಪ್ರತಿಯೊಂದು ತತ್ವವನ್ನು ರಕ್ಷಿಸಲು, ಅವರಿಂದ ಪಡೆದುಕೊಂಡ ಪ್ರತಿಯೊಂದು ಹಕ್ಕನ್ನು ರಕ್ಷಿಸಲು ಮತ್ತು ಅವರು ಹೋರಾಡಿದ ಪ್ರತಿಯೊಂದು ಮೌಲ್ಯವನ್ನು ಎತ್ತಿಹಿಡಿಯಲು ನಾವು ಎದ್ದು ನಿಲ್ಲಬೇಕು' ಎಂದಿದ್ದಾರೆ.
'ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ನಮಗೆ ಕೇವಲ ಸಂವಿಧಾನವನ್ನು ನೀಡಲಿಲ್ಲ. ಬದಲಾಗಿ ನ್ಯಾಯ, ಸಮಾನತೆ ಮತ್ತು ಘನತೆಯ ಮೇಲೆ ಸ್ಥಾಪಿತವಾದ ಸಬಲೀಕೃತ ಭಾರತದ ದೃಷ್ಟಿಕೋನವನ್ನು ನೀಡಿದರು. ಈ ರಾಷ್ಟ್ರವು ಬಾಬಾಸಾಹೇಬರ ಆದರ್ಶಗಳ ಮೇಲೆ ನಿರ್ಮಿಸಲ್ಪಟ್ಟಿದೆ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ನನ್ನ ಎಲ್ಲ ಶಕ್ತಿಯಿಂದ ಅವುಗಳನ್ನು ರಕ್ಷಿಸಲು ಹೋರಾಡುತ್ತಲೇ ಇರುತ್ತೇನೆ. ಒಟ್ಟಾಗಿ, ನಾವು ಮತ್ತೊಮ್ಮೆ ಬಾಬಾಸಾಹೇಬರ ಕನಸಿನ ಭಾರತವನ್ನು ಸಾಕಾರಗೊಳಿಸುತ್ತೇವೆ. ಅಂಬೇಡ್ಕರ್ ಜಯಂತಿಯಂದು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು' ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

