ನಾಸಿಕ್: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನ(ಟಿಸಿಎಸ್) ಉದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಮತ್ತು ಬಲವಂತದ ಮತಾಂತರ ಮಾಡಲಾಗಿದೆ ಎಂಬ ಆರೋಪಗಳ ಕುರಿತ ತನಿಖೆಗೆ ನಾಸಿಕ್ ಪೊಲೀಸರು ರಾಜ್ಯ ಗುಪ್ತಚರ ವಿಭಾಗ(ಎಸ್‌ಐಡಿ), ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮತ್ತು ರಾಷ್ಟ್ರೀಯ ತನಿಖಾ ದಳದ(ಎನ್‌ಐಎ)ಸಹಾಯವನ್ನು ಕೋರಿದ್ದಾರೆ.
ಪ್ರಕರಣದ ಕುರಿತ ಮಾಹಿತಿ ಸಂಗ್ರಹಕ್ಕೆ ರಾಷ್ಟ್ರೀಯ ಮಹಿಳಾ ಆಯೋಗವು ಸತ್ಯ ಶೋಧನಾ ಸಮಿತಿಯನ್ನು ಕಳುಹಿಸಲು ನಿರ್ಧರಿಸಿದೆ.
'ಎಸ್‌ಐಡಿ, ಎಟಿಎಸ್ ಮತ್ತು ಎನ್‌ಐಎಗೆ ಪ್ರಕರಣದ ಎಲ್ಲ ದಾಖಲೆಗಳನ್ನು ನೀಡಲಾಗಿದೆ. ಆರೋಪಿಗಳಿಗೆ ಅಕ್ರಮ ಚಟುವಟಿಕೆ ನಡೆಸಲು ಅಂತರರಾಷ್ಟ್ರೀಯ ಸಂಪರ್ಕ ಅಥವಾ ಬಾಹ್ಯ ಬೆಂಬಲ ಇದೆಯೇ ಎಂಬುವುದು ತನಿಖಾ ಸಂಸ್ಥೆಗಳು ಮಾಹಿತಿ ನೀಡಿದ ಬಳಿಕವಷ್ಟೆ ತಿಳಿಯಲಿದೆ' ಎಂದು ನಾಸಿಕ್ ಪೊಲೀಸ್ ಆಯುಕ್ತ ಸಂದೀಪ್ ಕಾರ್ಣಿಕ್ ಅವರು ತಿಳಿಸಿದ್ದಾರೆ.
'ಒಂಬತ್ತು ಕಿರಿಯ ಉದ್ಯೋಗಿಗಳು ನೀಡಿದ ದೂರಿನ ಆಧಾರದಲ್ಲಿ ಮಾರ್ಚ್ 26ರಿಂದ ಏಪ್ರಿಲ್ 3ರವರೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಂಬತ್ತು ಪ್ರಕರಣ ದಾಖಲಾಗಿದೆ' ಎಂದು ತಿಳಿಸಿದ್ದಾರೆ.
ಪ್ರಕರಣವು ಸೂಕ್ಷ್ಮವಾಗಿರುವುದರಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಡಿಐಜಿ ಸದಾನಂದ ದಾತೆ ಅವರು ನಾಸಿಕ್ ಪೊಲೀಸರಿಂದ ಪ್ರತಿನಿತ್ಯ ತನಿಖೆಯ ಮಾಹಿತಿ ಪಡೆಯುತ್ತಿದ್ದಾರೆ.
ಮಾಧ್ಯಮ ವರದಿಗಳ ಆಧಾರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ನಿವೃತ್ತ ನ್ಯಾಯಮೂರ್ತಿ, ನಿವೃತ್ತ ಪೊಲೀಸ್ ಅಧಿಕಾರಿ, ಸುಪ್ರೀಂ ಕೋರ್ಟ್ ವಕೀಲರು ಮತ್ತು ಆಯೋಗದ ಸದಸ್ಯರನ್ನೊಳಗೊಂಡ ಸಮಿತಿಯು ನಾಸಿಕ್‌ನಲ್ಲಿರುವ ಟಿಸಿಎಸ್ ಕಂಪನಿಗೆ ಶುಕ್ರವಾರ ಭೇಟಿ ನೀಡಲಿದೆ.
cots - ರಾಜ್ಯದಲ್ಲಿ ಕಾರ್ಪೋರೆಟ್ ಜಿಹಾದ್ ನಡೆಯುತ್ತಿದೆ. ಜಿಹಾದಿ ಚಟುವಟಿಕೆಗಳನ್ನು ತಡೆಯಲು ಕಂಪನಿಗಳು ಹಿಂದೂಗಳನ್ನು ಮಾತ್ರ ನೇಮಿಸಿಕೊಳ್ಳುವ ಅಗತ್ಯವಿದೆ ನಿತೇಶ್ ರಾಣೆ ಮಹಾರಾಷ್ಟ್ರ ಸಚಿವ
- ಬಲವಂತದ ಮತಾಂತರ: 'ಸುಪ್ರೀಂ'ಗೆ ಅರ್ಜಿ ನವದೆಹಲಿ (ಪಿಟಿಐ): ಟಿಸಿಎಸ್ ಕಚೇರಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಮತಾಂತರದ ಆರೋಪ ಕೇಳಿಬಂದಿರುವುದರಿಂದ ಬಲವಂತದ ಮತಾಂತರವನ್ನು ಭಯೋತ್ಪಾದನಾ ಕಾಯ್ದೆಯಡಿ ಪರಿಗಣಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಗುರುವಾರ ಅರ್ಜಿಯೊಂದು ಸಲ್ಲಿಕೆಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಲವಂತದ ಮತಾಂತರ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ವಕೀಲರಾದ ಅಶ್ವನಿ ದುಬೆ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

