ಚೆನ್ನೈ: ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಹಿನ್ನಡೆಯಾಗಿರುವುದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದ್ದಾರೆ.
ಈ ಕುರಿತು ದಿಂಡಿಗಲ್‌ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, 'ಇದು ಕೇಸರಿ ಪಕ್ಷಕ್ಕೆ ಬಿದ್ದ ಮೊದಲ ಹೊಡೆತ.
ತಮಿಳುನಾಡನ್ನು ಕೆಣಕಲು ಬರಬೇಡಿ. ನಾವು ತಿರುಗೇಟು ನೀಡಿದರೆ ಅದನ್ನು ತಡೆದುಕೊಳ್ಳಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಮೋದಿ ಅವರ 12 ವರ್ಷಗಳ ಆಡಳಿತದಲ್ಲಿ ಅವರು ಅನುಭವಿಸಿದ ಮೊದಲ ಸೋಲು ಇದಾಗಿದೆ' ಎಂದು ಹೇಳಿದ್ದಾರೆ.
'ಇದು ಸಾಮಾನ್ಯ ಸೋಲಲ್ಲ, 100 ವರ್ಷಗಳ ನಂತರವೂ ಇತಿಹಾಸದಲ್ಲಿ ನೆನಪಿಟ್ಟುಕೊಳ್ಳುವಂತಹ ಸೋಲಾಗಿದೆ' ಎಂದಿದ್ದಾರೆ.
ಮುಂದುವರಿದು, 'ಇದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ಚುನಾವಣೆಗೂ ಮುನ್ನ ಎದುರಾದ ಭಾರಿ ಸೋಲಾಗಿದೆ' ಎಂದು ತಿಳಿಸಿದ್ದಾರೆ.
ನಂತರ ತೇಣಿಯಲ್ಲಿ ನಡೆದ ಪ್ರಚಾರದ ವೇಳೆ ಮಾತನಾಡಿದ ಸ್ಟಾಲಿನ್, 'ಸಂಸತ್ತಿನಲ್ಲಿ ಮಸೂದೆ ಸೋತಿರುವುದು ಕೇವಲ 'ಟ್ರೈಲರ್' ಅಷ್ಟೆ' ಎಂದು ಹೇಳಿದ್ದಾರೆ.
'ಮುಂದಿನ ದಿನಗಳಲ್ಲಿ ನಮಗೆ ಇನ್ನೂ ಹೆಚ್ಚಿನ ಜಯ ಸಿಗಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಎಕ್ಸ್‌ನಲ್ಲಿ ಧನ್ಯವಾದ ಹೇಳಿದ್ದಾರೆ.

