ಮುಂಬೈ: ದೇಶದ ನಂಬರ್ 1 ಟೆಕ್ ಕಂಪನಿ ಎನಿಸಿಕೊಂಡಿರುವ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸ್)ನ ನಾಸಿಕ್ ಘಟಕದಲ್ಲಿ ಬಲವಂತದ ಮತಾಂತರ ಆರೋಪಕ್ಕೆ ಒಳಗಾಗಿ, ನಾಪತ್ತೆಯಾಗಿರುವ ನಿಧಾ ಖಾನ್ ಬಗ್ಗೆ ಅವರ ಪತಿ ಪೊಲೀಸರಿಗೆ ಮಾಹಿತಿ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ನಿಧಾ ಪತಿ ಮೊಯಿನ್ ನವೀದ್ ಇಕ್ಬಾಲ್ ಖಾನ್ ಅವರನ್ನು ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದರು. ಈ ವೇಳೆ, ಏಪ್ರಿಲ್ 14ರಂದು ನಿಧಾ ಖಾನ್ ಮನೆ ಬಿಟ್ಟು ಹೋಗಿದ್ದು ಸಂಬಂಧಿಕರ ಮನೆಯಲ್ಲಿದ್ದಾರೆ ಎಂದು ಮೊಯಿನ್ ನವೀದ್ ಇಕ್ಬಾಲ್ ತಿಳಿಸಿದ್ದರು.
ಪೊಲೀಸರು ಅಲ್ಲಿಗೆ ಹೋಗಿ ನೋಡಿದಾಗ ಆ ಮನೆಗೆ ಬೀಗ ಹಾಕಲಾಗಿತ್ತು. ಅಲ್ಲಿದ್ದವರ ಮೊಬೈಲ್ ಫೋನ್‌ಗಳು ಕೂಡ ಸ್ವಿಚ್ ಆಫ್ ಆಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆಯಲ್ಲಿರುವ ಸಂಬಂಧಿ ನೂರಿ ಶೇಕ್ ಮನೆಗೆ ನಿಧಾ ವಾರದ ಹಿಂದೆ ಹೋಗಿದ್ದಾರೆ ಎಂದು ಮೊಯಿನ್ ನವೀದ್ ಇಕ್ಬಾಲ್ ಮತ್ತೊಂದು ಹೇಳಿಕೆ ನೀಡಿದ್ದು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಮೊಯಿನ್ ನವೀದ್ ಇಕ್ಬಾಲ್ ಮುಂಬ್ರಾದಲ್ಲಿರುವ ಅಮೆಜಾನ್ ವೆಬ್ ಸರ್ವಿಸಸ್‌ನ ಲಾಜಿಸ್ಟಿಕ್ಸ್ ವಿಭಾಗದಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಮತಾಂತರ ಪ್ರಕರಣದಲ್ಲಿ ನಿಧಾ ಹೆಸರು ಕೇಳಿಬರುತ್ತಿದ್ದಂತೆ ಟಿಸಿಎಸ್ ಕಂಪನಿಯು ಆಕೆಯನ್ನು ಅಮಾನತುಗೊಳಿಸಿದೆ.
ಬಂಧನದಿಂದ ತಪ್ಪಿಸಿಕೊಳ್ಳಲು ನಿಧಾ ಖಾನ್ ತಲೆಮರೆಸಿಕೊಂಡಿದ್ದಾರೆ.

