ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ಈ ಸದಸ್ಯರು ಪಕ್ಷವನ್ನು ತೊರೆದು ಬಿಜಿಪಿಗೆ ಸೇರಿರುವುದು ಪಕ್ಷಾಂತರ ನಿಷೇಧ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಿದರು.
ಶುಕ್ರವಾರ ಪಕ್ಷದ ಸಂಸದರಾದ ರಾಘವ ಛಡ್ಡಾ, ಅಶೋಕ ಮಿತ್ತಲ್, ಸಂದೀಪ ಪಾಠಕ್, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ, ವಿಕ್ರಮ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಆಪ್ ಗೆ ಭಾರೀ ರಾಜಕೀಯ ಹಿನ್ನಡೆಯನ್ನುಂಟು ಮಾಡಿತ್ತು.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ತನ್ನ ಸ್ಥಾಪಕ ತತ್ವಗಳು ಮತ್ತು ಮೂಲ ಮೌಲ್ಯಗಳಿಂದ ದೂರವಾಗಿದೆ ಎಂದು ಪಕ್ಷಾಂತರಗೊಂಡಿರುವ ಸದಸ್ಯರು ಆರೋಪಿಸಿದ್ದಾರೆ.
ಛಡ್ಡಾ ಒಂದು ಪಕ್ಷದ ಶಾಸಕಾಂಗ ಘಟಕದ ಮೂರನೇ ಎರಡರಷ್ಟು ಸದಸ್ಯರು ಅನರ್ಹತೆಯನ್ನು ಎದುರಿಸದೆ ಇನ್ನೊಂದು ಪಕ್ಷವನ್ನು ಸೇರಲು ಅವಕಾಶ ನೀಡಿರುವ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲೇಖಿಸಿ ಬಿಜೆಪಿಗೆ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆಪ್ ರಾಜ್ಯಸಭೆಯಲ್ಲಿ ಒಟ್ಟು 10 ಸ್ಥಾನಗಳನ್ನು ಹೊಂದಿರುವುದರಿಂದ ಈ ಏಳು ಸದಸ್ಯರ ಗುಂಪು ಅಗತ್ಯವಿರುವ ಮೂರನೇ ಎರಡರಷ್ಟು ಸಂಖ್ಯೆಯನ್ನು ಮೀರಿದೆ.
ಆದರೆ ಇದನ್ನು ವಿರೋಧಿಸಿದ ಸಿಂಗ್,ತನ್ನ ಪಕ್ಷವು ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಮಾಜಿ ಲೋಕಸಭಾ ಮಹಾ ಕಾರ್ಯದರ್ಶಿ ಸೇರಿದಂತೆ ಸಾಂವಿಧಾನಿಕ ತಜ್ಞರೊಂದಿಗೆ ಚರ್ಚಿಸಿದೆ. ಕಾನೂನಿನಡಿ ಈ ಸದಸ್ಯರು ಅನರ್ಹತೆಗೆ ಒಳಗಾಗುತ್ತಾರೆ ಎಂದು ಈ ತಜ್ಞರು ಅಭಿಪ್ರಾಯಿಸಿದ್ದಾರೆ ಎಂದು ತಿಳಿಸಿದರು.
ಏಳು ಸದಸ್ಯರ ಪೈಕಿ ಆರು ಜನರು ರಾಜ್ಯಸಭೆಯಲ್ಲಿ ಪಂಜಾಬನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಪಕ್ಷಾಂತರಗಳು ವಿಶೇಷವಾಗಿ ಪಂಜಾಬಿನಲ್ಲಿ ಜನಾದೇಶಕ್ಕೆ ಎಸಗಿರುವ ದ್ರೋಹವಾಗಿವೆ ಎಂದು ಸಿಂಗ್ ಆರೋಪಿಸಿದರು. ಈ ಸದಸ್ಯರು ನಿರ್ದಿಷ್ಟವಾಗಿ ಆಪ್ ಟಿಕೆಟ್ ನಲ್ಲಿ ಆಯ್ಕೆಯಾಗಿದ್ದಾರೆ ಮತ್ತು ಅವರು ಬಿಜೆಪಿಗೆ ಸೇರಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದ ಕೃತ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಈ ಸಂಸದರ ಸದಸ್ಯತ್ವಗಳನ್ನು ರದ್ದುಗೊಳಿಸುವಂತೆ ಆಪ್ ರಾಜ್ಯಸಭೆಯ ಸಭಾಪತಿಗಳನ್ನು ಅಧಿಕೃತವಾಗಿ ಆಗ್ರಹಿಸಿದೆ.

