ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು 'ನರಕ ಕೂಪ' ಎಂದು ಹೇಳಿರುವುದನ್ನು ಖಂಡಿಸಿ ಭಾರತೀಯ ಯುವ ಕಾಂಗ್ರೆಸ್ ಸದಸ್ಯರು ಸೋಮವಾರ ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ದೆಹಲಿಯಲ್ಲಿನ ಅಮೆರಿಕ ರಾಯಭಾರ ಕಚೇರಿಯ ಕಡೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ಪ್ರತಿಭಟನಕಾರರನ್ನು ತಡೆದ ಪೊಲೀಸರು 10ರಿಂದ 15 ಜನರನ್ನು ವಶಕ್ಕೆ ಪಡೆದರು.
'ಭಾರತವನ್ನು ನರಕ ಕೂಪವೆಂದು ಕರೆಯುವುದು ಸಮರ್ಥನೀಯವಲ್ಲ. ನಾವು ಇದರ ಬಗ್ಗೆ ಧ್ವನಿ ಎತ್ತುತ್ತೇವೆ' ಎಂದು ಪ್ರತಿಭಟನಕಾರರೊಬ್ಬರು ಹೇಳಿದರು.
'ನಿಗದಿತ ಸ್ಥಳದಲ್ಲಿ ಅವರು ಪ್ರತಿಭಟನೆ ನಡೆಸಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಲವರನ್ನು ವಶಕ್ಕೆ ಪಡೆದಿದ್ದೇವೆ' ಎಂದು ಪೊಲೀಸರು ತಿಳಿಸಿದ್ದಾರೆ.

