ಮುಳ್ಳೇರಿಯ: ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ದಶಮಾನ ಸಂಭ್ರಮ ಕಾರ್ಯಕ್ರಮ ಸ್ಕಂದ ಪ್ಲಾಸ್ಟಿಕ್ಸ್ ಸಂಸ್ಥೆಯ ವಠಾರದಲ್ಲಿ ಜರುಗಿತು. ಎಡನೀರು ಶ್ರೀ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ-ಕೃತಿ " ಅಪರಂಜಿ "ಯನ್ನು ಎಡನೀರುಶ್ರೀಗಳು ಅನಾವರಣಗೊಳಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಮಂದಿಗೆ ಪೂಜ್ಯ ಶ್ರೀಗಳು ಯಕ್ಷತೂಣೀರ ಸಂಪ್ರತಿಷ್ಠಾನದ ದಶಮಾನದ ಸಂಭ್ರಮದ ಶುಭಸಂದರ್ಭದಲ್ಲಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದರು.
ಗೋಪಾಲಕೃಷ್ಣ ಭಟ್ ತುಪ್ಪೆಕಲ್ಲು ವೈದಿಕ ಕ್ಷೇತ್ರ, ತೆಕ್ಕೆಕರೆ ಶಂಕರನಾರಾಯಣ ಭಟ್ - ಕನ್ನಡ ನಾಡು ಸಮಗ್ರಸೇವೆ, ವಿಷ್ಣು ಭಟ್ ಬಜೆ ಪಾಕಶಾಸ್ತ್ರ, ಡಾ. ಕೆ. ಎಂ. ಕೆ. ಭಟ್ ಕಾಟಿಪಳ್ಳ - ವೈದ್ಯಕೀಯ, ಯತೀಶ್ ಕುಮಾರ್ ರೈ - ಶಿಕ್ಷಣ ಹಾಗೂ ಕಲೆ, ಗಣಪತಿ ಭಟ್ ಮಧುರಕಾನನ - ಕೃಷಿ ಮತ್ತು ಸಾಹಿತ್ಯ, ಹರೀಶ್ ಆದೂರು - ಪತ್ರಿಕೋದ್ಯಮ ಮತ್ತು ಸಾಹಿತ್ಯ, ಅನುಪಮಾ ರಾಘವೇಂದ್ರ ಉಡುಪುಮೂಲೆ-ಭರತನಾಟ್ಯ ಮತ್ತು ಸಾಹಿತ್ಯ, ರಾಕೇಶ್ ಗೋಳಿಯಡ್ಕ-ಪ್ರಸಾದನ ಕಲೆ, ಶ್ರೀಲಕ್ಷ್ಮೀ ಕುಳೂರು-ಚಿತ್ರಕಲೆಗಾಗಿ ಸಾಧನಾ ಪ್ರಶಸ್ತಿ ಪಡೆದುಕೊಂಡರು.
ವ್ಯಂಗ್ಯಚಿತ್ರಗಾರ ವೆಂಕಟ್ ಭಟ್ ಎಡನೀರು ಪೆರಡಂಜಿ ಸ್ಮರಣೆ, ನಾ. ಕಾರಂತ ಪೆರಾಜೆ ಅಪರಂಜಿ ಕೃತಿ ಪರಿಚಯವನ್ನು ನಡೆಸಿದರು. ಯಕ್ಷಗಾನದ ಭಾಗವತರಾದ ವೆಂಕಟ್ರಮಣ ಭಟ್ ತಲ್ಪಣಾಜೆ ಅವರಿಗೆ ಪೆರಡಂಜಿ ಪ್ರಶಸ್ತಿ, ಯಕ್ಷಗಾನ ಕಲಾವಿದ ವಿಶ್ವನಾಥ ಭಟ್ ಬಜೆ, ರಾಜೇಶ್ವರಿ ಈಶ್ವರ ಭಟ್ ಅವರಿಗೆ ಯಕ್ಷತೂಣೀರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಕ್ಷತೂಣೀರ ಸಂಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲ ಎಂ. ನಾರಾಯಣ ಭಟ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುರಳೀಕೃಷ್ಣ ಸ್ಕಂದ ಸ್ವಾಗತಿಸಿದರು. ಗೀತಾ ಪ್ರಾರ್ಥನೆ ಹಾಡಿದರು. ಶಿವಕುಮಾರ್ ಅಡ್ಕ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಮೂರ್ತಿ, ಹರಿಕೃಷ್ಣ ಭಟ್, ಗೋವಿಂದ ಭಟ್ ಬಳ್ಳಮೂಲೆ ಸನ್ಮಾನ ಪತ್ರ ವಾಚಿಸಿದರು. ಕೃಷ್ಣ ಭಟ್ ಅಡ್ಕ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ . ಸಾದ್ವಿ ಕೃಷ್ಣ ವಯನಾಡು, ಅನ್ವಿತಾ ಪೆರಡಂಜಿ ಅವರಿಂದ ನೃತ್ಯಾರ್ಪಣ, ಮತ್ತು ಚಿತ್ರಲಕ್ಷ್ಮಿ ಅವರಿಂದ ಪ್ರತ್ಯಕ್ಷದಾರಚಿತ್ರ ಪ್ರಸ್ತುತಿ ನಡೆಯಿತು.
ಈ ಸಂದರ್ಭ ಪ್ರತಿಷ್ಠಾನದ ಹಾಗೂ ಅತಿಥಿ ಕಲಾವಿದರಿಂದ ' ಮೇದಿನಿ ನಿರ್ಮಾಣ-ಮಹಿಷ ವಧೆ ' ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.


