ವಾಷಿಂಗ್ಟನ್ (PTI): 'ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್), ಅಮೆರಿಕದ ಕು ಕ್ಲಕ್ಸ್ ಕ್ಲಾನ್ (ಶ್ವೇತವರ್ಣೀಯರ ಪರಮಾಧಿಪತ್ಯದ ಸಂಘಟನೆ) ಸಂಘಟನೆಯಲ್ಲ. ಸಮಾಜದ ವಿವಿಧ ಕಾರ್ಯ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ' ಎಂದು ಆರ್‌ಎಸ್‌ಎಸ್ ಮಹಾ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಹಡ್ಸನ್ ಇನ್‌ಸ್ಟಿಟ್ಯೂಟ್ ಗುರುವಾರ ಹಮ್ಮಿಕೊಂಡಿದ್ದ 'ನವಭಾರತ' ಕುರಿತ ಸಮ್ಮೇಳನದಲ್ಲಿಲೇಖಕ ವಾಲ್ಟರ್ ರಸೆಲ್ ಮೀಡ್ ಅವರೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು, ಅವರು ಮಾತನಾಡಿದರು.
'ಅಮೆರಿಕದಲ್ಲಿ ಭಾರತದ ಬಗ್ಗೆ ಇರುವ ತಪ್ಪು ಕಲ್ಪನೆಯೇ ಆರ್‌ಎಸ್‌ಎಸ್ ಕುರಿತೂ ಇದೆ. ಆರ್‌ಎಸ್‌ಎಸ್ ಹಿಂದೂ ಪರಮಾಧಿಪತ್ಯದ ಸಂಘಟನೆ. ಕ್ರೈಸ್ತರು, ಮುಸ್ಲಿಮರ ವಿರೋಧಿ, ಅಭಿವೃದ್ಧಿ ಮತ್ತು ಆಧುನಿಕತೆಯ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ರೂಪಿಸಲಾದ ಕಾರ್ಯಸೂಚಿಯ ಸಂಕಥನವಿದು. ದಶಕಗಳಿಂದ ಇದನ್ನು ಸೃಷ್ಟಿಸಲಾಗಿದೆ' ಎಂದು ಹೊಸಬಾಳೆ ಹೇಳಿದರು.
'ಭಾರತದ ಕೆಲವು ಕು ಕ್ಲಕ್ಸ್ ಕ್ಲಾನ್ ಮಾದರಿ ಸಂಘಟನೆಗಳು ಆರ್‌ಎಸ್‌ಎಸ್‌ನ ಒಳ್ಳೆಯ ವಿಚಾರಗಳನ್ನು ಹೇಳದೇ, ವಿರೋಧಿ ವಿಚಾರಗಳನ್ನು ಹರಡುತ್ತಿವೆ. ಆದರೆ, ಭಾರತದ ಸಂಸ್ಕೃತಿ ಮತ್ತು ನಾಗಕರಿಕತೆಯ ವಿಶಿಷ್ಟ ಲಕ್ಷಣಗಳ ಬೇರುಳ್ಳ ಜನರ ಸ್ವಯಂಸೇವಾ ಚಳವಳಿಯೇ ಆರ್‌ಎಸ್‌ಎಸ್' ಎಂದರು.
'ಇಡೀ ಜಗತ್ತು ಒಂದೇ ಎಂಬುದು ಹಿಂದೂ ತತ್ತ್ವ ಮತ್ತು ಸಂಸ್ಕೃತಿ. ಆರ್‌ಎಸ್‌ಎಸ್‌ನ ಹಿಂದೂ ಎಂಬುದು ನಾಗರಿಕತೆಯ ಹೆಗ್ಗುರುತು; ಯಾವುದೇ ಧರ್ಮದ ಗುರುತಲ್ಲ. ಅಲ್ಪಸಂಖ್ಯಾತರು ಮತ್ತು ನೆರೆಯ ದೇಶಗಳ ಜೊತೆಗಿನ ಆತಂಕವು ರಾಜಕೀಯ ಹಿತಾಸಕ್ತಿ ಮತ್ತು ಇತಿಹಾಸದ ತಪ್ಪು ವ್ಯಾಖ್ಯಾನದಿಂದ ಸೃಷ್ಟಿಯಾಗಿವೆ' ಎಂದು ಹೇಳಿದರು.
ಅಮೆರಿಕಲ್ಲಿರುವ ಭಾರತೀಯರ ವೇದಿಕೆಯು ಗುರುವಾರ ಸಂಜೆ ವರ್ಜಿನಿಯಾ ನಗರದಲ್ಲಿ ದತ್ತಾತ್ರೇಯ ಹೊಸಬಾಳೆ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಗ್ರೇಟರ್ ವಾಷಿಂಗ್ಟನ್ ಭಾಗದ ಅಪಾರ ಜನರು ಭಾಗವಹಿಸಿದ್ದರು.
ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎ ಸ್‌ಸಿಐಆರ್‌ಎಫ್) ನೀಡಿದ್ದ ವಾರ್ಷಿಕ ವರದಿಯಲ್ಲಿ ಆರ್‌ಎಸ್‌ಎಸ್ ಮೇಲೆ ನಿರ್ಬಂಧಗಳನ್ನು ಹೇರಲು ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಹೊಸಬಾಳೆ ಅವರು ಅಮೆರಿಕದಲ್ಲೇ ಆರ್‌ಎಸ್‌ಎಸ್ ಕಾರ್ಯವೈಖರಿ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

