ಕಾಸರಗೋಡು: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕಾಸರಗೋಡು ನಗರದ ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನ: ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ಪ್ರತಿಷ್ಠೆ, ಶ್ರೀ ಗುಳಿಗ ಹಾಗೂ ಶ್ರೀ ಕೊರಗಜ್ಜನ ದೈವದ ಜೋಡಿಕೋಲ, ವಿವಿಧ ವೈದಿಕ, ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಏ. 26ರಿಂದ ಮೇ 2ರ ವರೆಗೆ ಕ್ಷೇತ್ರದ ತಂತ್ರಿವರ್ಯರಾದ ಶ್ರೀಕೃಷ್ಣ ಗುರೂಜಿ ನೇತೃತ್ವದಲ್ಲಿ ಆಗಮೋಕ್ತ ವಿಧಿಗಳೊಂದಿಗೆ ಜರಗಲಿರುವುದಾಗಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
26ರಂದು ಬೆಳಗ್ಗೆ 5ಕ್ಕೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸಂಜೆ 4.30ಕ್ಕೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಿಂದ ಕಾಳ್ಯಂಗಾಡು ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ, ನಂತರ ಉಗ್ರಾಣ ಮುಹೂರ್ತ ನಡೆಯುವುದು. ಪ್ರತಿದಿನ ವಿವಿಧ ಭಜನಾ ತಂಡಗಳಿಂದ ಭಜನೆ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
27ರಂದು ಮೂಕಾಂಬಿಕಾ ವೇದಿಕೆಯಲ್ಲಿ ಸಂಜೆ 5ಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರು ಸಾಂಸ್ಕøತಿಕ-ಧಾರ್ಮಿಕ ಕಾರ್ಯಕ್ರಮಗಳ ಉದ್ಘಾನೆ ನೆರವೇರಿಸುವರು. ಏ. 29ರಂದು ಬೆಳಗ್ಗೆ 9.48ರಿಂದ 11.25 ವರೆಗೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವಿಯ ಪ್ರತಿಷ್ಠೆ, ಜೀವಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ, ಕವಾಟಬಂಧನ ನಡೆಯುವುದು. ಏ. 30ರಂದು ಬೆಳಗ್ಗೆ 9.30ರಿಂದ 11.00 ಗಂಟೆಯ ತನಕ ಒದಗುವ ಶುಭ ಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯುವುದು.
ಮೇ 1ರಂದು ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನಿಡುವರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. 2ರಂದು ಸಂಜೆ 5ಕ್ಕೆ ಭಂಡಾರ ಮನೆಯಿಂದ ಭಂಡಾರ ಆಗಮನ, 6ಕ್ಕೆ ಗುಳಿಗ ದೈವದ ಕೋಲ, ರಾತ್ರಿ 8ಕ್ಕೆ ಶ್ರೀಕೊರಗತನಿಯ ದೈವದ ಜೋಡಿ ಕೋಲ ನಡೆಯಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಹರೀಶ್ ಕೆ.ಆರ್, ಶಾಂತಕುಮಾರ್ ಮುಮಡಿತ್ತಡ್ಕ, ಮೋಹನ್‍ರಾಜ್ ಕೊರಕ್ಕೋಡು, ದಯಾನಂದ ಕೊಳ್ಕೆಬೈಲ್, ಗೋವಿಂದ ಕಾಳ್ಯಂಗಾಡು, ರಂಜಿತ್ ಮನ್ನಿಪ್ಪಾಡಿ, ಜಗದೀಶ್ ಕೂಡ್ಲು ಉಪಸ್ಥಿತರಿದ್ದರು.

