ಪುಣೆ: 'ಅಗತ್ಯವಿದ್ದಲ್ಲಿ ಸಿಂಧೂರ ಕಾರ್ಯಾಚರಣೆ 2.0ಗೆ ನಮ್ಮ ಸಶಸ್ತ್ರ ಪಡೆಗಳು ಸಂಪೂರ್ಣ ಸನ್ನದ್ಧಗೊಂಡಿವೆ' ಎಂದು ಸೇನಾ ಮುಖ್ಯಸ್ಥ ಜನಲರ್ ಉಪೇಂದ್ರ ದ್ವಿವೇದಿ ಅವರು ಶನಿವಾರ ಹೇಳಿದರು.
ಪುಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಯುದ್ಧಕ್ಕಾಗಿ ಮೂರೂ ಪಡೆಗಳು ಸಮನ್ವಯತೆ ಸಾಧಿಸಿವೆ.
ಸದ್ಯ ಯುದ್ಧವು ತಾತ್ಕಾಲಿಕವಾಗಿ ನಿಂತಿರಬಹುದು. ಮೂರು ಪಡೆಗಳು ತೀವ್ರ ತಯಾರಿ ನಡೆಸಿದ್ದು, ಯುದ್ಧ ನಡೆದರೆ ಅದಕ್ಕೆ ಸಿದ್ಧವಾಗಿವೆ' ಎಂದರು.
ಪಹಲ್ಗಾಮ್‌ನಲ್ಲಿ 26 ಜೀವಗಳನ್ನು ಬಲಿಪಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತವು 'ಸಿಂಧೂರ' ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಆದರೆ ಈಗ ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ' ಎಂದು ಹೇಳಿದರು.
'ಭವಿಷ್ಯದ ಯುದ್ಧಗಳು ಭೂಮಿ, ನೆಲ ಹಾಗೂ ವಾಯುದಾಳಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಾಗಿ ಬಾಹ್ಯಾಕಾಶ, ಸೈಬರ್ ಸೇರಿದಂತೆ ಹಲವು ಕ್ಷೇತ್ರಗಳಿಂದ ಪ್ರಭಾವಿತವಾಗಿರುತ್ತದೆ. ಭವಿಷ್ಯದ ಸಂಘರ್ಷಗಳಲ್ಲಿ ಸಾರ್ವಜನಿಕ ನಂಬಿಕೆ ಮತ್ತು ರಾಷ್ಟ್ರೀಯ ಒಗ್ಗಟ್ಟು ನಿರ್ಣಾಯಕ ಅಂಶಗಳಾಗಿರುತ್ತವೆ' ಎಂದೂ ಅವರು ಹೇಳಿದರು.

