ಲಖನೌ: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ 28 ಮಂದಿ ಮೃತಪಟ್ಟಿದ್ದು, ಅಪಾರ ಹಾನಿ ಉಂಟಾಗಿದೆ.
ನೂರಾರು ಮರಗಳು ಉರುಳಿದ್ದು, ಅನೇಕ ಮನೆಗಳು ಕುಸಿದಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ವ್ಯಾಪಕ ಬೆಳೆ ಹಾನಿಯಾಗಿದೆ.
ಬುಂದೇಲಖಂಡ್ ಪ್ರದೇಶದಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದೆ. ಮನೆಗಳ ಕುಸಿತದಿಂದ ಹತ್ತು ಜನರು ಮೃತಪಟ್ಟಿದ್ದಾರೆ. ಮಥುರಾ, ಉನ್ನಾವೊ, ಫತೇಹಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಹಾಗೂ ಕೌಶಂಬಿ ಜಿಲ್ಲೆಯಲ್ಲಿ ನಾಲ್ವರು ಅಸುನೀಗಿದ್ದಾರೆ.
ದೇವರಿಯಾ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟರೆ, ಸಹರಾನ್‌ಪುರ ಜಿಲ್ಲೆಯ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಇಬ್ಬರು ಮಹಿಳೆಯರು ಕೊಚ್ಚಿ ಹೋಗಿದ್ದಾರೆ.

