ನವದೆಹಲಿ: ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಇಲ್ಲ ಎಂಬ ತೀರ್ಮಾನಕ್ಕೆ ಬಂದಾಗ ಮಾತ್ರ ಮರಣ ದಂಡನೆ ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ಅಪರೂಪದಲ್ಲಿ ಅಪರೂಪವೆನಿಸಿದ ಪ್ರಕರಣಗಳಲ್ಲಿ ಸಾಧಾರಣ ಜೀವಾವಧಿ ಶಿಕ್ಷೆ ಸಾಕಾಗುವುದಿಲ್ಲ ಎಂದು ನ್ಯಾಯಾಲಯಗಳು ಭಾವಿಸಿದಲ್ಲಿ, ಕ್ಷಮಾಪಣೆಗೆ ಅವಕಾಶ ಇಲ್ಲದ ನಿರ್ದಿಷ್ಟ ಅವಧಿಯ ಜೀವಾವಧಿ ಶಿಕ್ಷೆ ವಿಧಿಸಬೇಕು.
ಇಂತಹ ಸಂದರ್ಭಗಳಲ್ಲಿ ನೀಡುವ ಶಿಕ್ಷೆಯು ಅಪರಾಧದ ಗಂಭೀರತೆಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳಬೇಕು' ಎಂದೂ ಹೇಳಿದೆ.
ಉತ್ತರಾಖಂಡದಲ್ಲಿ ತನ್ನ ಮಾಜಿ ಉದ್ಯೋಗದಾತ ಮತ್ತು ಸೂಪರ್‌ವೈಸರ್ ಹತ್ಯೆ ಮಾಡಿದ್ದ ವ್ಯಕ್ತಿಗೆ ವಿಧಿಸಿದ್ದ ಮರಣ ದಂಡನೆಯನ್ನು 25 ವರ್ಷ ಜೈಲು ಶಿಕ್ಷೆಯಾಗಿ ಮಾರ್ಪಡಿಸಿ ತೀರ್ಪು ನೀಡಿದ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ತನಗೆ ಮರಣ ದಂಡನೆ ವಿಧಿಸಿ ಹೊರಡಿಸಿದ್ದ ಆದೇಶ ಎತ್ತಿ ಹಿಡಿದು ಉತ್ತರಾಖಂಡ ಹೈಕೋರ್ಟ್ 2018ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಶಹಜಾದ್ ಅಲಿ ಅಲಿಯಾಸ್ ಅಲಿ ಉರ್ ರೆಹಮಾನ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ವಿಜಯ ಬಿಷ್ಣೋಯಿ ಅವರು ಇದ್ದ ನ್ಯಾಯಪೀಠ ನಡೆಸಿತು.
ಡೆಹ್ರಾಡೂನ್ ಜಿಲ್ಲೆಯ ಸೆಲಾಕುಯಿ ಪಟ್ಟಣದಲ್ಲಿ ಸಂಜಯ ಕುಮಾರ್ ಗುಲೇರಿಯಾ ಮಾಲೀಕತ್ವದ ದ್ವಿಚಕ್ರ ವಾಹನ ಶೋರೂಮ್‌ನಲ್ಲಿ ಅಲಿ ಹೆಡ್ ಮೆಕಾನಿಕ್ ಆಗಿದ್ದ. ಶೋರೂಮ್‌ನ ಸೂಪರ್‌ವೈಸರ್ ಲಲಿತಾ ಅವರ ದೂರು ಆಧರಿಸಿ, ಅಲಿಯನ್ನು ಗುಲೇರಿಯಾ ಕೆಲಸದಿಂದ ತೆಗೆದು ಹಾಕಿದ್ದರು.
ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಅಲಿ ಮಾಡಿದ್ದ ಮನವಿಗಳಿಗೆ ಗುಲೇರಿಯಾ ಸ್ಪಂದಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ಅಲಿ, ಶೋರೂಮ್‌ನಲ್ಲಿಯೇ ಗುಲೇರಿಯಾ ಅವರ ಕತ್ತು ಸೀಳಿ ಹತ್ಯೆ ಮಾಡಿದ್ದ. ಜೀವ ಭಯದಿಂದ ಓಡಿಹೋಗಲು ಯತ್ನಿಸಿದ್ದ ಲಲಿತಾ ಅವರನ್ನು ಬೆನ್ನತ್ತಿದ್ದ ಅಲಿ, ಸಮೀಪದ ಖಾಲಿ ಜಾಗದಲ್ಲಿ ಹಲವು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ನಂತರ ಶೋರೂಮ್‌ಗೆ ಬೆಂಕಿ ಹಚ್ಚಿ, ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ.
ಸಾಕ್ಷ್ಯಾಧಾರಗಳ ಆಧಾರದಲ್ಲಿ ಅಲಿಗೆ ನೀಡಿದ್ದ ಮರಣದಂಡನೆಯನ್ನು ಎತ್ತಿ ಹಿಡಿದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅಲಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮೇ 6ರಂದು ತೀರ್ಪು ನೀಡಿದೆ.
'ಇದು, ಅಪರಾಧಿಗೆ ಮರಣ ದಂಡನೆ ನೀಡುವಂತಹ 'ಅಪರೂಪದಲ್ಲಿಯೇ ಅಪರೂಪ' ವರ್ಗಕ್ಕೆ ಸೇರಿದ ಪ್ರಕರಣವಲ್ಲ. ಮೇಲ್ಮನವಿದಾರನಿಂದ ಸಮಾಜಕ್ಕೆ ಬೆದರಿಕೆ ಇದೆ ಅಥವಾ ಮನಪರಿವರ್ತನೆ ಆತನಿಂದ ಸಾಧ್ಯ ಇಲ್ಲ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳು ಇಲ್ಲ' ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ.
'ಅಲಿ ಸಮಾಜದ ಕೆಳ ಸ್ತರಕ್ಕೆ ಸೇರಿದ ವ್ಯಕ್ತಿ ಹಾಗೂ ಜೀವನೋಪಾಯಕ್ಕಾಗಿ ಅಸರೆಯಾಗಿದ್ದ ಕೆಲಸವನ್ನೂ ಕಳೆದುಕೊಂಡಿದ್ದ. ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಆತ ಪದೇಪದೇ ಮಾಡಿದ್ದ ಮನವಿಗಳನ್ನು ತಿರಸ್ಕರಿಸಲಾಗಿತ್ತು. ಇದರಿಂದ ಅವಮಾನ ಅನುಭವಿಸಿದ್ದ ಆತ, ತೀವ್ರವಾಗಿ ಹತಾಶೆಗೊಂಡಿದ್ದ' ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಸ್ವಾಮಿ ಶ್ರದ್ಧಾನಂದ(2008) ಹಾಗೂ ಕೇಂದ್ರ ಸರ್ಕಾರ ವಿರುದ್ಧ ವಿ.ಶ್ರೀಹರನ್(2016) ಪ್ರಕರಣಗಳಲ್ಲಿನ ತೀರ್ಪನ್ನು ಉಲ್ಲೇಖಿಸಿರುವ ಪೀಠ, ಅಲಿಗೆ ನೀಡಿದ್ದ ಮರಣ ದಂಡನೆಯನ್ನು ಯಾವುದೇ ಕ್ಷಮಾಪಣೆಗೆ ಅವಕಾಶ ಇಲ್ಲದೆ 25 ವರ್ಷಗಳ ಜೈಲು ಶಿಕ್ಷೆಯಾಗಿ ಮಾರ್ಪಡಿಸಿದೆ.
ಕಾಯ್ದಿರಿಸಿದ ತೀರ್ಪು: 3 ತಿಂಗಳಲ್ಲಿ ಪ್ರಕಟಿಸಿ
ನವದೆಹಲಿ (ಪಿಟಿಐ): ಕಾಯ್ದಿರಿಸಿದ ತೀರ್ಪುಗಳನ್ನು ಮೂರು ತಿಂಗಳೊಳಗೆ ಪ್ರಕಟಿಸುವಂತೆ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ. ವಿಳಂಬವು ದಾವೆದಾರರಿಗೆ ಸರಿಪಡಿಸಲಾಗದ ನಷ್ಟವನ್ನು ಉಂಟು ಮಾಡುತ್ತದೆ ಎಂದಿರುವ ನ್ಯಾಯಾಲಯ, ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣಗಳಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆಯೂ ಸೂಚಿಸಿದೆ. ಹೈಕೋರ್ಟ್ ತೀರ್ಪನ್ನು ಅಪ್‌ಲೋಡ್ ಮಾಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ನಿ ಅವರ ಪೀಠವು ಹೈಕೋರ್ಟ್‌ಗಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.
'ಸುಪ್ರೀಂ' ನಿರ್ದೇಶನಗಳು
Iಜಾಮೀನು ಅರ್ಜಿಗಳ ಕುರಿತ ಆದೇಶಗಳನ್ನು ಅದೇ ದಿನ ಪ್ರಕಟಿಸಬೇಕು. ಒಂದು ವೇಳೆ ಅವುಗಳನ್ನು ಕಾಯ್ದಿರಿಸಿದ್ದರೆ ಮರುದಿನ ಪ್ರಕಟಿಸಿ, ಅಪ್‌ಲೋಡ್ ಮಾಡಬೇಕು
Iಜಾಮೀನು ಅಥವಾ ಶಿಕ್ಷೆಯ ಅಮಾನತು ಆದೇಶ ಪ್ರಕಟವಾದ ತಕ್ಷಣ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಮತ್ತು ವಿಚಾರಣಾದೀನ ಅಥವಾ ಶಿಕ್ಷೆಗೊಳಗಾದವರನ್ನು ಅದೇ ದಿನ ಅಥವಾ ಹೆಚ್ಚೆಂದರೆ ಮರುದಿನ ಬಿಡುಗಡೆ ಮಾಡಬೇಕು
|ಆದೇಶ ಕಾಯ್ದಿರಿಸಿದ ನಾಲ್ಕು ತಿಂಗಳೊಳಗೆ ತೀರ್ಪು ಪ್ರಕಟಿಸದಿದ್ದರೆ, ಕಕ್ಷಿದಾರರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯನ್ನು ಸಂರ್ಪಕಿಸಿ, ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಕೋರಬಹುದು
Iಮುಕ್ತ ನ್ಯಾಯಾಲಯದಲ್ಲಿ ತೀರ್ಪು ನೀಡಿದಾಗ, 24 ಗಂಟೆಗಳ ಒಳಗೆ ತೀರ್ಪನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು
|ಸುಪ್ರೀಂ ಕೋರ್ಟ್ ನೀಡಿದ ಈ ನಿರ್ದೇಶನಗಳು ಯಾವುದೇ ನಿರ್ದಿಷ್ಟ ನ್ಯಾಯಮೂರ್ತಿ ಅಥವಾ ಹೈಕೋರ್ಟ್ ತೀರ್ಪಿನ ಕುರಿತ ಆಕ್ಷೇಪಣೆಗಳಲ್ಲ ಎಂಬುದು ಪೀಠ ಸ್ಪಷ್ಟಪಡಿಸಿದೆ.

