ಪುಣೆ: ಶತ್ರುಗಳ ಪ್ರಚೋದನೆಗಳಿಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ 'ಆಪರೇಷನ್ ಸಿಂಧೂರ' ಸಾಕ್ಷಿಎಂದು ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ತಿಳಿಸಿದ್ದಾರೆ.
ಪುಣೆಯ ಖಡಕ್ವಾಸ್ಲಾದಲ್ಲಿ ನಡೆದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ150ನೇ ಕೋರ್ಸ್‌ನ ಪಾಸಿಂಗ್-ಔಟ್ ಪರೇಡ್‌ನ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇಂದಿನ ಭದ್ರತಾ ವಾತಾವರಣವು 'ಗ್ರೇ ಝೋನ್'ನಿಂದ ಹಿಡಿದು ಹೈಬ್ರಿಡ್ ಯುದ್ಧತಂತ್ರದವರೆಗೆ ವ್ಯಾಪಿಸಿದೆ ಎಂದಿದ್ದಾರೆ.
ಇಂತಹ ಸಂದರ್ಭದಲ್ಲಿ ಸೇವೆಯಲ್ಲಿರುವವರು ಅತ್ಯಂತ ಚುರುಕಾಗಿ ಆಲೋಚಿಸಿ ಕಾರ್ಯನಿರ್ವಹಿಸಬೇಕಾಗುತ್ತದೆ. 2025ರ ಮೇ ತಿಂಗಳಲ್ಲಿ ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಯಾದ 'ಆಪರೇಷನ್ ಸಿಂಧೂರ' ಇಂತಹ ಸಮಗ್ರ ಪ್ರತಿಕ್ರಿಯೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.
ರಾಷ್ಟ್ರೀಯ ಸಂಕಲ್ಪವನ್ನು ದೃಢತೆಯೊಂದಿಗೆ ಪ್ರದರ್ಶಿಸಿದ 'ಆಪರೇಷನ್ ಸಿಂಧೂರ', ಪ್ರಚೋದನೆಗಳಿಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದಿದ್ದಾರೆ.
ಮುಂಬರುವ ದಿನಗಳಲ್ಲಿ ಮಹಿಳೆಯರು ಮತ್ತು ಪುರುಷರು ಯಾವುದೇ ಪಡೆಯ ಸಮವಸ್ತ್ರ ಧರಿಸಿದರೂ, ಹೆಗಲಿಗೆ ಹೆಗಲು ಕೊಟ್ಟು ಒಟ್ಟಾಗಿ ದೇಶ ಸೇವೆ ಮಾಡಲಿದ್ದಾರೆ ಎಂದು ದ್ವಿವೇದಿ ಹೇಳಿದ್ದಾರೆ.
ಇದೇ ವೇಳೆ, ಸುಮಾರು 42 ವರ್ಷಗಳ ಹಿಂದೆ ತಾವೂ ಇದೇ ಅಕಾಡೆಮಿಯಿಂದ ತೇರ್ಗಡೆಯಾಗಿದ್ದನ್ನು ಸ್ಮರಿಸಿದ ಅವರು, 'ಇದು ನನಗೆ ಅತ್ಯಂತ ಭಾವುಕ ಕ್ಷಣವಾಗಿದೆ. ನಾನು ನನ್ನ ಸಮವಸ್ತ್ರದ ಸೇವಾವಧಿಯ ಕೊನೆಯ ಹಂತದಲ್ಲಿದ್ದು, ನಿವೃತ್ತಿಗೆ ಸಜ್ಜಾಗುತ್ತಿದ್ದರೆ, ನೀವು ಸಮವಸ್ತ್ರ ಧರಿಸಿ ಸೇವೆಗೆ ಸಿದ್ಧರಾಗುತ್ತಿದ್ದೀರಿ. ಇಲ್ಲಿ ನೀವು ಆರಂಭಿಸುವ ಶಿಸ್ತು ಮತ್ತು ಮೌಲ್ಯಗಳು ಜೀವನಪೂರ್ತಿ ಉಳಿಯುತ್ತವೆ ಎಂದು ಕೆಡೆಟ್ ಗಳಿಗೆ ಕಿವಿಮಾತು ಹೇಳಿದ್ದಾರೆ.

