ನವದೆಹಲಿ: 2009ರ ಪೌರತ್ವ ನಿಯಮಾವಳಿ ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಗುರುವಾರ ಅಧಿಸೂಚನೆ ಪ್ರಕಟಿಸಿದೆ.
ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್‌ದಾರರು ಮತ್ತು ಪೌರತ್ವ ಅರ್ಜಿಗಳ ಪ್ರಕ್ರಿಯೆಯಲ್ಲಿ ಡಿಜಿಟಲ್ ಬದಲಾವಣೆಗಳನ್ನು ತಂದಿದೆ.
ಅಧಿಸೂಚನೆ ಪ್ರಕಾರ, ಅಪ್ರಾಪ್ತರು ಭಾರತೀಯ ಪಾಸ್‌ಪೋರ್ಟ್ ಹೊಂದಿರುವಾಗ ಬೇರೆ ಯಾವುದೇ ದೇಶದ ಪಾಸ್‌ಪೋರ್ಟ್ ಅನ್ನು ಹೊಂದುವಂತಿಲ್ಲ ಎಂಬ ನಿಬಂಧನೆಯನ್ನು ಸೇರಿಸಿದೆ.
ಭಾರತದ ಪೌರತ್ವ: ಕಾಯ್ದೆ ಹೇಳುವುದೇನು?
ಇನ್ನು ಮುಂದೆ ಒಸಿಐ ಕಾರ್ಡ್‌ಗಾಗಿ ಕಾಗದದ ಮೂಲಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಒಸಿಐ ಕಾರ್ಡ್ ನೋಂದಣಿ ಹಾಗೂ ಕಾರ್ಡ್ ರದ್ದತಿಗಾಗಿ ಅರ್ಜಿದಾರರು ಅಧಿಕೃತ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದ್ದಲ್ಲದೆ ದಾಖಲೆಗಳ ಸರಳೀಕರಣಕ್ಕಾಗಿ ಎರಡು ಪ್ರತಿಗಳಲ್ಲಿ (ನಕಲಿ) ಸಲ್ಲಿಸಬೇಕಾಗಿದ್ದ ನಿಯಮವನ್ನು ತೆಗೆದು ಹಾಕಲಾಗಿದೆ. ಇ-ಒಸಿಐ ಪರಿಚಯಿಸಲಾಗಿದೆ.
ಒಸಿಐ ಅರ್ಜಿದಾರರು ಬಯೋಮೆಟ್ರಿಕ್ ಮಾಹಿತಿ ನೀಡುವ ಮೂಲಕ 'ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ ಪ್ರೋಗ್ರಾಂ'ಗೆ ಒಪ್ಪಿಗೆ ಸೂಚಿಸಬಹುದು. ಇದು ಭವಿಷ್ಯದ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ.
ಒಸಿಐ ಸ್ಥಾನಮಾನವನ್ನು ತ್ಯಜಿಸಿದರೆ ಅಥವಾ ಸರ್ಕಾರ ಅದನ್ನು ರದ್ದುಗೊಳಿಸಿದರೆ, ಭೌತಿಕ ಕಾರ್ಡ್ ಅನ್ನು ಹತ್ತಿರದ ಭಾರತೀಯ ರಾಯಭಾರ ಕಚೇರಿ ಅಥವಾ ಪ್ರಾದೇಶಿಕ ನೋಂದಣಿ ಕಚೇರಿಗೆ ಸಲ್ಲಿಸಬೇಕು ಎಂದು ಹೇಳಿದೆ.

