ಗುವಾಹಟಿ: ಅಸ್ಸಾಂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೌರವ್ ಗೊಗೊಯ್ ಮೊದಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಜೋರ್ಹತ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಹಿತೇಂದ್ರನಾಥ್ ಗೋಸ್ವಾಮಿ ವಿರುದ್ಧ 23,182 ಮತಗಳಿಂದ ಸೋತಿದ್ದಾರೆ.
ಗೊಗೊಯ್, ತಂದೆ ತರುಣ್ ಗೊಗೊಯ್ ಅವರ ರಾಜಕೀಯ ಮಾರ್ಗವನ್ನು ಅನುಸರಿಸುವ ಮೂಲಕ ರಾಜ್ಯ ರಾಜಕೀಯಕ್ಕೆ ಮರಳಲು ಸಜ್ಜಾಗಿದ್ದರು, ಆದರೆ ಬಿಜೆಪಿಯ ಅಬ್ಬರದ ನಡುವೆ ಹೀನಾಯವಾಗಿ ಸೋಲುಕಂಡಿದ್ದಾರೆ.
ಗೊಗೊಯ್ 46,257 ಮತಗಳನ್ನು ಪಡೆದರೆ, ಗೋಸ್ವಾಮಿ 69,439 ಮತಗಳನ್ನು ಪಡೆದು ಸತತ ಮೂರನೇ ಬಾರಿಗೆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ಜೋರ್ಹತ್‌ನಿಂದ ನಿರಾಯಾಸವಾಗಿ ಜಯಗಳಿಸಿದ್ದ ಗೊಗೊಯ್, ಈ ಬಾರಿ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. ಗೊಗೊಯ್ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಂತೆ ಆಡಳಿತಾರೂಢ ಬಿಜೆಪಿ, ವಿಶೇಷವಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ವ್ಯಾಪಕ ಪ್ರಚಾರ ಮಾಡಿತ್ತು.
ಹಿಮಂತ ಶರ್ಮಾ, 'ಗೊಗೊಯ್ ಮತ್ತು ಅವರ ಪತ್ನಿ ಪಾಕಿಸ್ತಾನದ ಐಎಸ್‌ಐ ಜತೆ ಸಂಪರ್ಕ ಹೊಂದಿದ್ದಾರೆ' ಎಂದಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡವನ್ನೂ ರಚಿಸಲಾಗಿತ್ತು. ಎಸ್‌ಐಟಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತನ್ನ ವರದಿಯನ್ನು ಸಲ್ಲಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಗೊಗೊಯ್, ಆರೋಪಗಳನ್ನು ಆಧಾರ ರಹಿತವಾಗಿದ್ದು, ಈ ಚಿತ್ರಕಥೆಯು ಸಿ-ಗ್ರೇಡ್ ಬಾಲಿವುಡ್ ಚಿತ್ರಕ್ಕಿಂತ ಕೆಟ್ಟದಾಗಿದೆ ಎಂದಿದ್ದರು.
ಗೊಗೊಯ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಲಾಗಿತ್ತು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಇಬ್ಬರಿಗೂ ಹತ್ತಿರವಾಗಿದ್ದ ಗೊಗೊಯ್ ಅಬ್ಬರದ ಪ್ರಚಾರವನ್ನೂ ಮಾಡಿದ್ದರು, ಆದರೆ ಜನ ಕೈ ಹಿಡಿಯಲಿಲ್ಲ.
ನವದೆಹಲಿಯ ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದಿಂದ 2004 ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಗೊಗೊಯ್, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಯುಕೆ ಮೂಲದ ಎಲಿಜಬೆತ್ ಕ್ಲೇರ್ ಎನ್ನುವ ಯುವತಿಯನ್ನು ವಿವಾಹವಾಗಿದ್ದಾರೆ.

