ಕಾಸರಗೋಡು: ಶೈಕ್ಷಣಿಕ ವರ್ಷದ ಆರಂಭದಲ್ಲಿ ಜಿಲ್ಲೆಯ ಶಾಲೆಗಳಲ್ಲಿ ಶಿಕ್ಷಕರು ಮತ್ತು ಶಾಲಾ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅಗತ್ಯವಿರುವ ನೋಟ್‍ಬುಕ್‍ಗಳು, ಕಲಿಕಾ ಪುಸ್ತಕಗಳು ಮತ್ತು ಇತರ ಕಲಿಕಾ ಸಾಮಗ್ರಿಗಳನ್ನು ಅನಧಿಕೃತವಾಗಿ ಮಾರಾಟ ಮಾಡದಿರುವಂತೆ ಪುಸ್ತಕ ಮಳಿಗೆ ಮಾಲೀಕರ ವೇದಿಕೆ ಸರ್ಕಾರವನ್ನು ಆಗ್ರಹಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವೇದಿಕೆ ರಾಜ್ಯ ಸಮಿತಿ ಅಧ್ಯಕ್ಷ ರತೀಶ್ ಪುತ್ಯಪುರಯಿಲ್ ಮಾತನಾಡಿದರು.
ಶಿಕ್ಷಕರು ಯಾವುದೇ ಸಂದರ್ಭದಲ್ಲೂ ಶಾಲೆಗಳಲ್ಲಿ ಪುಸ್ತಕಗಳು ಅಥವಾ ಇತರ ಕಲಿಕಾ ಸಾಮಗ್ರಿಗಳನ್ನು ಮಾರಾಟ ಮಾಡಬಾರದು. ಸರ್ಕಾರಿ ಸುತ್ತೋಲೆ ಜಾರಿಯಲ್ಲಿರುವಾಗ ಶಿಕ್ಷಕರು ನಡೆಸುವ ಈ ವ್ಯವಹಾರ ಕಾನೂನು ವಿರುದ್ಧವಾಗಿದೆ. ಪುಸ್ತಕ ಮಳಿಗೆಗಳು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ, ಶಿಕ್ಷಕರು ಮತ್ತು ಶಾಲೆಗಳ ಈ ಕ್ರಮವನ್ನು ವೇದಿಕೆ ಬಲವಾಗಿ ವಿರೋಧಿಸುತ್ತದೆ. ಹೆಚ್ಚಿನ ಬಾಡಿಗೆ ಪಾವತಿಸಿ ನಡೆಸಲಾಗುವ ಅನೇಕ ಪುಸ್ತಕ ಮಳಿಗೆಗಳು ಮುಚ್ಚುವ ಭೀತಿಯಲ್ಲಿದೆ. ಆನ್‍ಲೈನ್ ವ್ಯವಸ್ಥೆಗಳು, ಹಾಗೆಯೇ ಶೈಕ್ಷಣಿಕ ವರ್ಷದಲ್ಲಿ ಒಂದು ಅಥವಾ ಎರಡು ತಿಂಗಳು ಮಾತ್ರ ತೆರೆದುಕಾರ್ಯಾಚರಿಸುವ ಕೆಲವು ಸಂಸ್ಥೆಗಳು, ಏಕಸ್ವಾಮ್ಯ ಅಂಗಡಿಗಳ ಚಟುವಟಿಕೆಗಳಿಂದ ಸಣ್ಣ ಪುಸ್ತಕ ಮಳಿಗೆಗಳು ಬಿಕ್ಕಟ್ಟು ಎದುರಿಸುವಂತಾಗಿದೆ. ಶಾಲೆಗಳಲ್ಲಿ ಪುಸ್ತಕ ಮಾರಾಟದ ವಿರುದ್ಧ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಮತ್ತು ಶಿಕ್ಷಣ ನಿರ್ದೇಶಕರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುಸ್ತಕ ಮಳಿಗೆ ಮಾಲೀಕರ ವೇದಿಕೆಯ ಕಾಸರಗೋಡು ಜಿಲ್ಲಾಧ್ಯಕ್ಷ ರಾಜೀವನ್.ಇ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಯಿ ಮುರಳಿ ಚೀಮೇನಿ, ರಾಜ್ಯ ಕಾರ್ಯಕಾರಿ ಸದಸ್ಯ ಅಬ್ದುಲ್ ಸಮದ್ ಮೌಲವಿ, ಜಿಲ್ಲಾ ಪದಾಧಿಕಾರಿಗಳಾದ ನರೇಂದ್ರನ್ ಮಯೂರ ಮತ್ತು ಅಶ್ರಫ್ ಮೈತ್ರಿ ಉಪಸ್ಥಿತರಿದ್ದರು.

