ಚಂಡೀಗಢ: ಭೂ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಪಂಜಾಬ್ ಮತ್ತು ಚಂಡೀಗಢದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಪಂಜಾಬ್ ಮುಖ್ಯಮಂತ್ರಿಗಳ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿಯೊಬ್ಬರ ಆಪ್ತ ಗೋಹಲ್ ನಿವಾಸದ ಮೇಲೂ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಹಾಲಿ ಮತ್ತು ಚಂಡೀಗಢ ಸೇರಿದಂತೆ 12 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಸನ್‌ಟೆಕ್ ಸಿಟಿ ಯೋಜನೆ, ಅಜಯ್ ಸೆಹಗಲ್ ಕಂಪನಿ, ಎಬಿಎಸ್ ಟೌನ್‌ಶಿಪ್ ಸೇರಿದಂತೆ ಇತರೆ ಕಂಪನಿಗಳ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಕಾಗದ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಮೊಹಾಲಿಯ 'ವೆಸ್ಟರ್ನ್ ಟವರ್ಸ್' ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ₹ 500 ರೂಪಾಯಿ ನೋಟುಗಳಿದ್ದ ಎರಡು ಚೀಲಗಳನ್ನು ಕೆಳಕ್ಕೆ ಎಸೆಯಲಾಗಿದೆ. ಕೆಳಕ್ಕೆ ಬಿದ್ದ ಚೀಲಗಳಿಂದ ನೋಟಿನ ಕಂತೆಗಳು ನೆಲದ ಮೇಲೆ ಹರಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಅಕಾಲಿದಳದ ನಾಯಕ ವಿಕ್ರಮ್ ಸಿಂಗ್ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಗಾಳಿಯಲ್ಲಿ ₹ 500 ನೋಟುಗಳು ಹಾರುತ್ತಿವೆ. ಈ ಹಣ ಸಿಎಂ ಮಾನ್ ಆಪ್ತನಿಗೆ ಸೇರಿದ್ದು ಎಂದು ಹೇಳಿದ್ದಾರೆ. ವಂಚಕರು ಈಗ ಇಡಿ ಬಲೆಗೆ ಬಿದ್ದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
2027ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಜಾಬ್‌ನಲ್ಲಿ ರಾಜಕೀಯ ನಾಯಕರ ವಿರುದ್ಧ ಇಡಿ ದಾಳಿ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

