HEALTH TIPS

ತಮಿಳುನಾಡಿನಲ್ಲಿ ಸರ್ಕಾರ ರಚನೆ ಕಗ್ಗಂಟು: ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯವೇ?

 ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ನೂತನ ಸರ್ಕಾರ ರಚನೆಗೆ ಸಂಬಂಧಪಟ್ಟಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. 


234 ಸದಸ್ಯ ಬಲದ ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಆದರೆ ಸರ್ಕಾರ ರಚನೆಗೆ ಸಂಬಂಧ ಎರಡೆರಡು ಸಲ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾದರೂ ಬಹುಮತಕ್ಕೆ ಸಂಬಂಧಿಸಿದಂತೆ ಕಗ್ಗಂಟು ಮುಂದುವರಿದಿದೆ.

ಬುಧವಾರ ವಿಜಯ್ ಲೋಕಭವನಕ್ಕೆ ಭೇಟಿ ನೀಡಿದಾಗ ಸಂಖ್ಯಾಬಲದ ದಾಖಲೆ ಕೇಳಿದ ರಾಜ್ಯಪಾಲರು ಗುರುವಾರದಂದು ಬಹುಮತಕ್ಕೆ ಬೇಕಾದ ಸಂಖ್ಯಾಬಲ ಇಲ್ಲ ಎಂದು ವಾಪಸ್ ಕಳಿಸಿದ್ದರು.

ಅತ್ತ ವಿಜಯ್ ಅವರನ್ನು ಹಿಂದಿಕ್ಕಿ ಡಿಎಂಕೆ ಹಾಗೂ ಎಐಎಡಿಎಂಕೆ ಪರಸ್ಪರ ಕೈಜೋಡಿಸಿಕೊಂಡು ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಡಿಎಂಕೆ-ಎಐಎಡಿಎಂಕೆ ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆ ಕ್ಷೀಣವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ರಚಿಸಲು ಬಹುಮತ ಇಲ್ಲ: ಟಿವಿಕೆ ಮುಖ್ಯಸ್ಥ ವಿಜಯ್‌ಗೆ ತಿಳಿಸಿದ ರಾಜ್ಯಪಾಲಸರ್ಕಾರ ರಚನೆ ಕಸರತ್ತು: 24 ತಾಸಿನಲ್ಲಿ 2ನೇ ಸಲ ರಾಜ್ಯಪಾಲರನ್ನು ಭೇಟಿಯಾದ ವಿಜಯ್

'ಡಿಎಂಕೆ ಮತ್ತು ಎಐಎಡಿಎಂಕೆ ಜಂಟಿಯಾಗಿ ಮೈತ್ರಿ ಸರ್ಕಾರ ರಚಿಸಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅದು ಸಾಧ್ಯ ಎಂದು ನೀವು ಭಾವಿಸುವೀರಾ' ಎಂದು ಮಾಜಿ ಸಂಸದ, ಎಐಎಡಿಎಂಕೆ ಮಾಜಿ ಕೆ.ಸಿ ಪಳನಿಸಾಮಿ ಪ್ರಶ್ನಿಸಿದ್ದಾರೆ.

'ಒಂದು ವೇಳೆ ಮೈತ್ರಿ ಏರ್ಪಟ್ಟರೂ ಸಚಿವ ಸ್ಥಾನ ಹಂಚಿಕೆಯಲ್ಲಿ ಉಭಯ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಎದುರಾಗಲಿದೆ. ಮುಖ್ಯಮಂತ್ರಿ ಯಾರಾಗಲಿದ್ದಾರೆ? ಅದುವೇ ಅತಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆ' ಎಂದು ಅವರು ತಿಳಿಸಿದ್ದಾರೆ.

'ಇವೆಲ್ಲದರ ಹೊರತಾಗಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷದಲ್ಲಿರುವ ನಾಯಕರ ಮಧ್ಯೆಯೇ ಮೈತ್ರಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿವೆ' ಎಂದು ಹೇಳಿದ್ದಾರೆ.

'ಇದುವರೆಗೆ ಉಭಯ ಪಕ್ಷಗಳ ನಾಯಕರ ಮಧ್ಯೆ ಯಾವುದೇ ಮಾತುಕತೆ ನಡೆದಿಲ್ಲ' ಎಂದು ಹಿರಿಯ ರಾಜಕೀಯ ವಿಮರ್ಶಕ ಸತ್ಯಾಲಯ ರಾಮಕೃಷ್ಣನ್ ಖಚಿತಪಡಿಸಿದ್ದಾರೆ.

'ಮಾಧ್ಯಮಗಳಲ್ಲಿರುವ ಬಂದಿರುವ ವರದಿಯು ಊಹಾಪೋಹವಷ್ಟೇ. ಎರಡೂ ದ್ರಾವಿಡ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಯಾವುದೇ ಸಾಧ್ಯತೆ ಇಲ್ಲ' ಎಂದಿದ್ದಾರೆ.

'ನಮ್ಮ ಹಿರಿಯ ನಾಯಕರು ಒಪ್ಪುವುದಿಲ್ಲ. ಯಾವುದೇ ಹೊಂದಾಣಿಕೆ ಸಾಧ್ಯವಿಲ್ಲ' ಎಂದು ಡಿಎಂಕೆ ಪಕ್ಷದ ಹಿರಿಯ ಪದಾಧಿಕಾರಿ ವಿ. ಮಧಿವಾಣನ್ ಪ್ರತಿಕ್ರಿಯಿಸಿದ್ದಾರೆ.

'ಹಾಗೊಂದು ವೇಳೆ ಮೈತ್ರಿ ಸಾಧ್ಯತೆ ಇದ್ದಿದ್ದರೆ ಫಲಿತಾಂಶ ಪ್ರಕಟವಾದ ಕೂಡಲೇ ಚರ್ಚೆಗಳು ನಡೆಯುತ್ತಿದ್ದವು' ಎಂದಿದ್ದಾರೆ.

'ಎರಡೂ ಪಕ್ಷಗಳು ಸೈದ್ಧಾಂತಿಕವಾಗಿ ಭಿನ್ನವಾಗಿರುವುದರಿಂದ ಜೊತೆಗೂಡಿ ಸರ್ಕಾರ ರಚಿಸಲು ಸಾಧ್ಯವಾಗುವಿದಲ್ಲ. ಮೈತ್ರಿ ಸಾಧ್ಯವಾದರೂ ಒಂದು ವಾರದೊಳಗೆ ಸರ್ಕಾರ ಪತನಗೊಳ್ಳಲಿದೆ' ಎಂದು ಹೇಳಿದ್ದಾರೆ.

'ಟಿವಿಕೆ ಅತಿ ದೊಡ್ಡ ಪಕ್ಷವಾಗಿದ್ದರಿಂದ ವಿಜಯ್ ಅವರನ್ನೇ ಸರ್ಕಾರ ರಚನೆ ಹಾಗೂ ಬಹುಮತ ಸಾಬೀತು ಮಾಡಲು ರಾಜ್ಯಪಾಲರು ಆಹ್ವಾನಿಸಬೇಕು. ಇದುವೇ ಸಾಂವಿಧಾನಕ ಹಕ್ಕು' ಎಂದು ಪ್ರತಿಪಾದಿಸಿದ್ದಾರೆ.

234 ಸದಸ್ಯ ಬಲದ ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಮೇ 4ರಂದು ಫಲಿತಾಂಶ ಪ್ರಕಟಗೊಂಡಿತ್ತು. ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4, ವಿಸಿಕೆ, ಐಯುಎಂಎಲ್, ಸಿಪಿಐ ಮತ್ತು ಸಿಪಿಐ(ಎಂ) ತಲಾ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ಪಕ್ಷಗಳು ತಲಾ 1 ಸ್ಥಾನ ಪಡೆದುಕೊಂಡಿವೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries