ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯು ಸಿರಿಯಾದಲ್ಲಿ ನಡೆಸಿದ ಹೀನ ಕೃತ್ಯಗಳಿಗೆ ಲೆಕ್ಕವೇ ಇಲ್ಲ. ಇಡೀ ಜಗತ್ತೇ ಬೆಚ್ಚಿಬೀಳುವ ಮಟ್ಟಕ್ಕೆ ಆ ಉಗ್ರಗಾಮಿ ಸಂಘಟನೆ ಆತಂಕ ಸೃಷ್ಟಿಸಿತ್ತು. ಜಗತ್ತಿನ ವಿವಿಧೆಡೆ ಈಗಲೂ ಸಕ್ರಿಯವಾಗಿರುವ ಐಎಸ್‌ನ ಎರಡನೇ ಸ್ಥಾನದಲ್ಲಿದ್ದ, ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಕಮಾಂಡರ್ ಅಬು ಬಿಲಾಲ್ ಅಲ್ ಮಿನುಕಿಯನ್ನು ನೈಜೀರಿಯಾ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಕೊಂದಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅತ್ಯಂತ ಸಂಕೀರ್ಣ ಕಾರ್ಯಾಚರಣೆಯನ್ನು ಯಾವುದೇ ದೋಷವಿಲ್ಲದೆ ಸಮರ್ಪಕ ಯೋಜನೆ ಮೂಲಕ ಪೂರ್ಣಗೊಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಬಿಲಾಲ್ ಆಫ್ರಿಕಾದಲ್ಲಿ ಅತ್ಯಂತ ಪ್ರಭಾವಶಾಲಿ ಉಗ್ರ ನಾಯಕನಾಗಿದ್ದು, ಐಎಸ್ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿದ್ದ ಎನ್ನುತ್ತವೆ ವರದಿಗಳು. ಹಣಕಾಸು ನೆರವು, ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಕಾರ್ಯಾಚರಣೆಯ ಪ್ರತಿಯೊಂದು ಹಂತದಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಜಗತ್ತಿನಾದ್ಯಂತ ಇರುವ ಐಎಸ್ ಸಂಘಟನೆಯಲ್ಲಿ ಎರಡನೇ ಅತ್ಯುನ್ನತ ಸ್ಥಾನದಲ್ಲಿದ್ದ ಬಿಲಾಲ್ ಹತ್ಯೆಯು ಉಗ್ರಗಾಮಿ ಸಂಘಟನೆಗೆ ದೊಡ್ಡ ಹಿನ್ನಡೆ ಎಂದೇ ಉಭಯ ದೇಶಗಳು ಬಣ್ಣಿಸಿವೆ.
ಆಫ್ರಿಕಾದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳ ಕೇಂದ್ರ ಬಿಂದು
ವರದಿಗಳ ಪ್ರಕಾರ, ಅಬು ಬಿಲಾಲ್ ಅಲ್ ಮಿನುಕಿಯನ್ನು ಅಬು ಬಕರ್ ಇಬ್ನ್ ಮುಹಮ್ಮದ್ ಇಬ್ನ್ ಅಲಿ ಅಲ್ ಮೈನುಕಿ ಎಂದೂ ಕರೆಯಲಾಗುತ್ತಿತ್ತು. ಪ್ರಾಥಮಿಕವಾಗಿ ಆಫ್ರಿಕಾದ ಸಹೇಲ್ ಪ್ರದೇಶದಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದನು. ನೈಜೀರಿಯಾದ ಪ್ರಜೆ ಯಾಗಿರುವ ಈತ ತನ್ನ ಭಯೋತ್ಪಾದನಾ ಕೃತ್ಯಗಳ ಮೂಲಕ ಸಂಘಟನೆಯಲ್ಲಿ ವೇಗವಾಗಿ ಬೆಳೆದು ಇಸ್ಲಾಮಿಕ್ ಸ್ಟೇಟ್ ಪಶ್ಚಿಮ ಆಫ್ರಿಕಾ ಪ್ರಾಂತ್ಯದ(ಐಎಸ್‌ಡಬ್ಲ್ಯುಎಪಿ) ಹಿರಿಯ ಕಮಾಂಡರ್ ಆಗಿ ನೇಮಕಗೊಂಡಿದ್ದ ಎಂದು ಆಫ್ರಿಕಾದ ಭಯೋತ್ಪಾದಕ ನಿಗ್ರಹ ಯೋಜನೆ ತಿಳಿಸಿದೆ. ಇದು ಐಎಸ್‌ನ ಅತ್ಯಂತ ಸಕ್ರಿಯ ಪ್ರಾದೇಶಿಕ ಅಂಗಸಂಸ್ಥೆಗಳಲ್ಲಿ ಒಂದಾಗಿದೆ.
ಐಎಸ್‌ನ ಜಾಗತಿಕ ಪ್ರಾದೇಶಿಕ ಶಾಖೆಗಳ ಮೇಲ್ವಿಚಾರಣೆ ಮಾಡುವ ರೀಜನಲ್ ಜನರಲ್ ಡೈರೆಕ್ಟರೇಟ್‌ನ ಲೇಕ್ ಚಾಡ್ ವಿಭಾಗಕ್ಕೆ ಸಂಬಂಧಿಸಿದ ಕಾರ್ಯಾಚರಣೆಗಳನ್ನು ನಿರ್ದೇಶಿಸುವ ಜವಾಬ್ದಾರಿಯನ್ನು ಬಿಲಾಲ್ ಹೊಂದಿದ್ದನು ಎಂದು ವರದಿ ತಿಳಿಸಿದೆ.
ಸಹೇಲ್ ಪ್ರದೇಶ ಎಂದರೇನು?
ಸಹೇಲ್, ಆಫ್ರಿಕಾದಾದ್ಯಂತ ಸುಮಾರು 5,900 ಕಿಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವಿಶಾಲವಾದ ಅರೆ ಶುಷ್ಕ ಪ್ರದೇಶವಾಗಿದ್ದು, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರದಿಂದ ಪೂರ್ವದಲ್ಲಿ ಕೆಂಪು ಸಮುದ್ರದವರೆಗೆ ವ್ಯಾಪಿಸಿದೆ.
ಈ ಪ್ರದೇಶವು ಸಹಾರಾ ಮರುಭೂಮಿ ಮತ್ತು ದಕ್ಷಿಣಕ್ಕೆ ಹಸಿರು ಸವನ್ನಾ ಹುಲ್ಲುಗಾವಲು ಪ್ರದೇಶಗಳ ನಡುವಿನ ಪರಿವರ್ತನಾ ವಲಯವಾಗಿದೆ. ಸೆನೆಗಲ್, ಮಾರಿಟಾನಿಯಾ, ಮಾಲಿ, ಬುರ್ಕಿನಾ ಫಾಸೊ, ನೈಜರ್, ನೈಜೀರಿಯಾ, ಚಾಡ್ ಮತ್ತು ಸುಡಾನ್ ದೇಶಗಳಲ್ಲಿ ಚಾಚಿಕೊಂಡಿದೆ. ಗ್ಯಾಂಬಿಯಾ, ಗಿನಿಯಾ, ಕ್ಯಾಮರೂನ್ ಮತ್ತು ಎರಿಟ್ರಿಯಾದ ಕೆಲವು ಭಾಗಗಳಿಗೂ ವಿಸ್ತರಿಸಿದೆ.
ಕೆಲ ವರ್ಷಗಳಿಂದ ಸಹೇಲ್, ಐಎಸ್ ಮತ್ತು ಅಲ್ ಖೈದಾ ಸಂಬಂಧಿತ ಉಗ್ರಗಾಮಿಗಳ ಹಿಂಸಾಚಾರ, ದಂಗೆಗಳು ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಸಾಕ್ಷಿಯಾಗಿದ್ದು, ಭಯೋತ್ಪಾದಕರ ಹಾಟ್‌ಸ್ಪಾಟ್ ಎನಿಸಿದೆ.
2023ರಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದ ಅಮೆರಿಕ
ಜೋ ಬೈಡನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2023ರ ಜೂನ್‌ನಲ್ಲಿ ಅಮೆರಿಕವು ಬಿಲಾಲ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು.
ಆಫ್ರಿಕಾದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಐಎಸ್ ಸಂಬಂಧಿತ ಭಯೋತ್ಪಾದಕ ಘಟಕಗಳಿಗೆ ಅಂತರರಾಷ್ಟ್ರೀಯ ಹಣಕಾಸು, ಕಾರ್ಯಾಚರಣೆಯ ಮಾರ್ಗದರ್ಶನ ಮತ್ತು ಲಾಜಿಸ್ಟಿಕಲ್ ಬೆಂಬಲವನ್ನು ಬಿಲಾಲ್ ಒದಗಿಸುತ್ತಿದ್ದ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಬಿಲಾಲ್ ಹತ್ಯೆಯು ಐಎಸ್ ಕಾರ್ಯಾಚರಣೆಗೆ ದೊಡ್ಡ ಪೆಟ್ಟು
ಬಿಲಾಲ್ ಹತ್ಯೆಯನ್ನು ಟ್ರುತ್ ಸೋಶಿಯಲ್‌ನಲ್ಲಿ ಘೋಷಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್, ಇದು ಜಗತ್ತಿನಾದ್ಯಂತ ಐಎಸ್ ಕಾರ್ಯಾಚರಣೆಗೆ ದೊಡ್ಡ ಪೆಟ್ಟು ಎಂದಿದ್ದಾರೆ. ಆಫ್ರಿಕಾದಲ್ಲಿ ಅಡಗಿಕೊಳ್ಳುವ ಮೂಲಕ ತಪ್ಪಿಸಿಕೊಳ್ಳಬಹುದು ಎಂದು ನಂಬಿದ್ದನು. ಆದರೆ, ಅದು ಸುಳ್ಳಾಯಿತು ಎಂದು ಟ್ರಂಪ್ ಹೇಳಿದ್ದಾರೆ.
'ಬಿಲಾಲ್ ಜಾಗತಿಕವಾಗಿ ಐಎಸ್‌ನ ಎರಡನೇ ಕಮಾಂಡರ್ ಆಗಿದ್ದನು. ಆಫ್ರಿಕಾದಲ್ಲಿ ಅಡಗಿಕೊಂಡು ನಮ್ಮಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದ್ದನು. ಆದರೆ, ಅವನು ಏನು ಮಾಡುತ್ತಿದ್ದಾನೆಂದು ತಿಳಿಸುವ ಮೂಲಗಳು ನಮ್ಮಲ್ಲಿದ್ದವು ಎಂಬುದು ಆತನಿಗೆ ತಿಳಿದಿರಲಿಲ್ಲ' ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ಈ ಹತ್ಯೆಯಿಂದಾಗಿ ಆಫ್ರಿಕಾದ ಜನರ ಆತಂಕ ದೂರವಾಗಿದೆ. ಅಮೆರಿಕದ ಮೇಲೆ ದಾಳಿ ಯೋಜನೆಗೂ ತರೆಬಿದ್ದಿದೆ ಎಂದಿರುವ ಟ್ರಂಪ್, ಕಾರ್ಯಾಚರಣೆಗೆ ಸಹಕರಿಸಿದ ನೈಜೀರಿಯಾ ಸರ್ಕಾರಕ್ಕೂ ಧನ್ಯವಾದ ಹೇಳಿದ್ದಾರೆ.

