ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವೆ ನಡೆದ ಶೃಂಗಸಭೆಯು 'ಬಹಳ ಯಶಸ್ವಿ'ಯಾಗಿದೆ ಎಂದು ಉಭಯ ನಾಯಕರು ಬಣ್ಣಿಸಿದ್ದಾರೆ.
ಎರಡು ದೇಶಗಳ ನಡುವೆ ಉತ್ತಮವಾದ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ.
ಮಾತುಕತೆ 'ಬಹಳ ಯಶಸ್ವಿಯಾಗಿದೆ' ಎಂದು ಟ್ರಂಪ್ ಹೇಳಿಕೊಂಡಿದ್ದರೆ, ಷಿ ಅವರು ಇದೊಂದು 'ಐತಿಹಾಸಿಕ ಮತ್ತು ಮೈಲಿಗಲ್ಲು' ಭೇಟಿ ಎಂದು ಕರೆದಿದ್ದಾರೆ.
ಕೃಷಿ, ವಾಯುಯಾನ, ಎಲೆಕ್ಟ್ರಿಕ್ ವಾಹನಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ಸಿಇಒಗಳನ್ನೊಳಗೊಂಡ ಉನ್ನತ ಮಟ್ಟದ ಉದ್ಯಮಿಗಳ ನಿಯೋಗದೊಂದಿಗೆ ಟ್ರಂಪ್ ಅವರು ಬುಧವಾರ ಚೀನಾ ನಾಯಕ ಷಿ ಜಿನ್‌ಪಿಂಗ್ ಅವರೊಂದಿಗೆ ಮಹತ್ವದ ಶೃಂಗಸಭೆಗಾಗಿ ಆಗಮಿಸಿದ್ದರು.
ಇತ್ತೀಚಿನ ಇರಾನ್ ಯುದ್ಧದ ಕಾರಣದಿಂದ ಉಂಟಾಗಿದ್ದ ಉದ್ವಿಗ್ನತೆಯ ನಡುವೆಯೂ 'ವ್ಯಾಪಾರ ಒಪ್ಪಂದ'ವು ಕಾರ್ಯಸೂಚಿಯ ಪ್ರಮುಖ ಕೇಂದ್ರಬಿಂದುವಾಗಿತ್ತು. ಆದರೆ, ಉಭಯ ರಾಷ್ಟ್ರಗಳ ನಡುವೆ ಆಗಿರುವ ಒಪ್ಪಂದಗಳ ಬಗ್ಗೆ ವಿವರವಾದ ಮಾಹಿತಿ ನೀಡಿಲ್ಲ.
ಆದಾಗ್ಯೂ, ಏರ್‌ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಟ್ರಂಪ್, ಬೋಯಿಂಗ್ ಸಂಸ್ಥೆಯಿಂದ 200 ಜೆಟ್ ವಿಮಾನಗಳನ್ನು ಖರೀದಿಸಲು ಚೀನಾ ಒಪ್ಪಿಕೊಂಡಿದೆ ಮತ್ತು ಹೆಚ್ಚುವರಿಯಾಗಿ 750 ವಿಮಾನಗಳನ್ನು ಖರೀದಿಸುವ ಸಾಮರ್ಥ್ಯದ ಬದ್ಧತೆಯನ್ನು ತೋರಿಸಿದೆ ಎಂದು ಹೇಳಿದರು. ಈ ಒಪ್ಪಂದವನ್ನು ಏರೋಸ್ಪೇಸ್ ದೈತ್ಯ ಬೋಯಿಂಗ್ ಖಚಿತಪಡಿಸಿದೆ.
ಶತಕೋಟಿ ಡಾಲರ್ ಮೌಲ್ಯದ ಸೋಯಾಬೀನ್, ಗೋಮಾಂಸ ಮತ್ತು ಕೋಳಿ ಮಾಂಸ ಖರೀದಿಸಲು ಚೀನಾ ಸಮ್ಮಿತಿಸಿದೆ ಎಂದೂ ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ, ಚೀನಾ ಕಡೆಯಿಂದ ಯಾವುದೇ ಒಪ್ಪಂದಗಳು ಅಥವಾ ಖರೀದಿಗಳ ಬಗ್ಗೆ ಅಧಿಕೃತ ಖಚಿತತೆ ಸಿಕ್ಕಿಲ್ಲ.
ವ್ಯಾಪಾರ ಮತ್ತು ಸುಂಕ, ಕೃಷಿ, ಆರೋಗ್ಯ, ಪ್ರವಾಸೋದ್ಯಮ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ, ತೈವಾನ್‌ಗೆ ಅಮೆರಿಕದ ಶಸ್ತ್ರಾಸ್ತ್ರ ಮಾರಾಟ, ಚೀನಾದಿಂದ ಅಮೆರಿಕಕ್ಕೆ ವಿರಳ ಲೋಹಗಳ ಆಮದು ಸೇರಿದಂತೆ ಹಲವು ವಿಷಯಗಳ ಕುರಿತು ಟ್ರಂಪ್-ಜಿನ್‌ಪಿಂಗ್ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹಲವು ವರ್ಷಗಳಿಂದ ಎರಡೂ ದೇಶಗಳ ನಡುವೆ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವೈರುಧ್ಯಗಳಿವೆ. ಟ್ರಂಪ್ ಅವರೊಂದಿಗೆ ಚೀನಾಕ್ಕೆ ಭೇಟಿ ನೀಡಿದ್ದ ನಿಯೋಗದಲ್ಲಿ ಸಾಕಷ್ಟು ಉದ್ಯಮಿಗಳು ಭಾಗಿಯಾಗಿದ್ದರು. ಅವರೆಲ್ಲ ತಮ್ಮ ಕಂಪನಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

