ರಾಜ್ಯದ ರಾಜಕೀಯ ಲೆಕ್ಕಾಚಾರವನ್ನೇ ಬುಡಮೇಲುಗೊಳಿಸಿದ ತನ್ನ ಮೊದಲ ಚುನಾವಣೆಯಲ್ಲಿ ಟಿವಿಕೆ 107 ಸ್ಥಾನಗಳಲ್ಲಿ ಗೆಲುವು/ಮುನ್ನಡೆಯೊಂದಿಗೆ ತಮಿಳುನಾಡು ರಾಜಕೀಯದಲ್ಲಿ ಹೊಸ ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ. ಆದರೂ ವಿಜಯ ಅವರ ಹೊಸಪಕ್ಷಕ್ಕೆ ಬಹುಮತ ಸಾಧಿಸಲು ಅಗತ್ಯವಾದ 118ರ ಜಾದೂ ಸಂಖ್ಯೆಯನ್ನು ದಾಟಲು ಸಾಧ್ಯವಾಗಿಲ್ಲ. ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಟಿವಿಕೆ ಸರಕಾರ ರಚನೆಗೆ ಪ್ರಬಲ ಸ್ಪರ್ಧಿಯಾಗಿದ್ದರೂ, ಅದಕ್ಕಾಗಿ ಸ್ಪಷ್ಟ ಅವಕಾಶದಿಂದ ವಂಚಿತವಾಗಿದೆ.
ಚುನಾವಣಾ ಫಲಿತಾಂಶವು ತಮಿಳುನಾಡು ರಚನಾತ್ಮಕ ಬದಲಾವಣೆಯನ್ನು ನೋಡಲಿದೆಯೇ ಅಥವಾ ಇದು ನಟನ ಜನಪ್ರಿಯತೆಯಿಂದಾಗಿ ಉಂಟಾಗಿರುವ ತಾತ್ಕಾಲಿಕ ಅಲೆಯೇ ಎಂಬ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ಕೆ.ಕಾಮರಾಜ, ಎಂ.ಕರುಣಾನಿಧಿ, ಎಂ.ಜಿ.ರಾಮಚಂದ್ರನ್ ಮತ್ತು ಜೆ.ಜಯಲಲಿತಾರಂತಹ ದಿಗ್ಗಜರಿಂದ ದಶಕಗಳಿಂದಲೂ ರೂಪುಗೊಂಡಿರುವ ತಮಿಳುನಾಡಿನಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಟಿವಿಕೆ ಉದಯಗೊಂಡಿರುವುದನ್ನು ರಾಜ್ಯದಲ್ಲಿಯ ದ್ವಿಪಕ್ಷೀಯ ರಾಜಕೀಯ ವ್ಯವಸ್ಥೆಗೆ ಹೊಸ ಸವಾಲನ್ನಾಗಿ ನೋಡಲಾಗುತ್ತಿದೆ.
ಟಿವಿಕೆ ಈಗ ಬಹುಮತವಿಲ್ಲದ ಏಕೈಕ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವುದರೊಂದಿಗೆ ವಿಜಯ ಅವರ ಮುಂದಿನ ದಾರಿ ಯಾವುದು ಮತ್ತು ಅವರ ರಾಜಕೀಯ ಪ್ರಯೋಗವೇನಾಗಲಿದೆ ಎಂಬ ಬಗ್ಗೆ ಎಲ್ಲ ಗಮನ ಕೇಂದ್ರೀಕೃತವಾಗಿದೆ.
ಟಿವಿಕೆ ಸ್ಥಾಪಕ ವಿಜಯ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಚುನಾವಣಾ ಕಣಕ್ಕಿಳಿದಿದ್ದರು.
ವಿಜಯ ಏಕಾಂಗಿಯಾಗಿ ತನ್ನ ರಾಜಕೀಯ ಪಯಣದಲ್ಲಿ ಸಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು ಎಂದು ಅವರ ತಂದೆ ಹಾಗೂ ಮಾಜಿ ಚಿತ್ರನಿರ್ಮಾಪಕ ಚಂದ್ರಶೇಖರ ಸುದ್ದಿಸಂಸ್ಥೆಗೆ ತಿಳಿಸಿದರು. ಚಂದ್ರಶೇಖರ 1980ರ ದಶಕದಲ್ಲಿ ವಿಜಯರನ್ನು ಬಾಲ ಕಲಾವಿದರಾಗಿ ಪರಿಚಯಿಸುವ ಮೂಲಕ ಅವರ ವೃತ್ತಿಜೀವನಕ್ಕೆ ನಾಂದಿ ಹಾಡಿದ್ದರು.
ವಿಜಯ್ ಸುಮಾರು ಮೂರು ದಶಕಗಳಿಂದಲೂ ತಮಿಳುನಾಡಿನ ಅಭಿವೃದ್ಧಿಗೆ ಕೊಡುಗೆಯನ್ನು ಸಲ್ಲಿಸುವ ಕನಸನ್ನು ಕಾಣುತ್ತಿದ್ದರು. ಅವರ ಈ ಕನಸು ಈಗ ಅವರ ಚೊಚ್ಚಲ ಚುನಾವಣಾ ಪ್ರವೇಶಕ್ಕೆ ನಾಂದಿ ಹಾಡಿತ್ತು ಎಂದರು.
'ವಿಜಯ ಚಿಂತನೆಗಳಿಂದ ನಾನು ಪ್ರೇರಿತನಾಗಿದ್ದೇನೆ. ಒಬ್ಬ ಮನುಷ್ಯನಾಗಿ ನೀವು ಕಲಾವಿದರಷ್ಟೇ ಆಗಿರಬಾರದು, ನೀವು ಸ್ವಲ್ಪ ಸಾಮಾಜಿಕ ಚಿಂತನೆಯನ್ನೂ ಹೊಂದಿರಬೇಕು. ಕಳೆದ 30 ವರ್ಷಗಳಿಂದಲೂ ತಮಿಳುನಾಡಿಗಾಗಿ ಏನಾದರೂ ಮಾಡಬೇಕೆಂಬ ಚಿಂತನೆ ವಿಜಯರಲ್ಲಿತ್ತು. ಇಂದು ಅವರು ಮುಖ್ಯಮಂತ್ರಿಯಾಗುವ ಹೊಸ್ತಿಲಿನಲ್ಲಿದ್ದಾರೆ 'ಎಂದು ಚಂದ್ರಶೇಖರ್ ಹೇಳಿದರು.
'2024ರಲ್ಲಿ ತನ್ನ ಪಕ್ಷವನ್ನು ಸ್ಥಾಪಿಸಿದಾಗಿನಿಂದಲೂ ವಿಜಯ್ ತನ್ನ ರಾಜಕೀಯ ಭವಿಷ್ಯದ ಬಗ್ಗೆ ಬಲವಾದ ಆತ್ಮವಿಶ್ವಾಸವನ್ನು ಹೊಂದಿದ್ದರು. ಕಳೆದ ಎರಡು ವರ್ಷಗಳಲ್ಲಿ ಅವರ ಆತ್ಮವಿಶ್ವಾಸ ಮತ್ತು ತಾನು ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂಬ ಅವರ ನಂಬಿಕೆ ಅದ್ಭುತವಾಗಿತ್ತು. ಅವರ ಛಲವನ್ನು ನಾನು ಮೆಚ್ಚುತ್ತೇನೆ. ಓರ್ವ ನಾಯಕನಾಗಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಸ್ವಂತ ಕಾಲುಗಳ ಮೇಲೆ ನಿಲ್ಲುತ್ತೇನೆ ಎಂಬ ಧೈರ್ಯವನ್ನು ಅವರು ಹೊಂದಿದ್ದರು. ಇದು ಐತಿಹಾಸಿಕ ಯಶಸ್ಸು ಎಂದು ನಾನು ಭಾವಿಸಿದ್ದೇನೆ 'ಎಂದರು.
ಕಾಂಗ್ರೆಸ್‌ನಿಂದ ಬೆಂಬಲ?
ಬಹುಮತಕ್ಕೆ ಕೊರತೆಯಿರುವುದರಿಂದ ಚುನಾವಣೋತ್ತರ ರಾಜಕೀಯ ಮೈತ್ರಿಗಳ ಬಗ್ಗೆ ಮತ್ತು ಸರಕಾರ ರಚನೆಗಾಗಿ ಟಿವಿಕೆ ಕಾಂಗ್ರೆಸ್ ಬೆಂಬಲವನ್ನು ಕೋರಬಹುದೇ ಎಂಬ ಬಗ್ಗೆ ಈಗ ಎಲ್ಲರ ಗಮನ ಹರಿದಿದೆ. ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿದೆ.
ಇದೇ ವೇಳೆ,ಕಾಂಗ್ರೆಸ್ ತನ್ನ ರಾಷ್ಟ್ರೀಯ ನಿಲುವು ಮತ್ತು ಮೈತ್ರಿ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರವನ್ನು ಕೈಗೊಳ್ಳಬೇಕಿರುವುದು ಸರಕಾರ ರಚನೆ ಕುರಿತು ಅನಿಶ್ಚಿತತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಎಐಎಡಿಎಂಕೆ ಪಾತ್ರ
'ಅಮ್ಮಾ' ಜಯಲಲಿತಾರ ನಿಧನದ ಬಳಿಕ ಎಎಡಿಎಂಕೆ 2016ರ ಮುನ್ನ ತಾನು ಹೊಂದಿದ್ದ ಪ್ರಭಾವವನ್ನು ಮರಳಿ ಗಳಿಸಲು ಹೆಣಗಾಡುತ್ತಿರುವುದನ್ನು ಚುನಾವಣೆಯು ತೋರಿಸಿದೆ. ಹೀಗಿದ್ದರೂ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದ ಈ ಸಂದರ್ಭದಲ್ಲಿ ಸರಕಾರ ರಚನೆಯಲ್ಲಿ ಅದು ಪ್ರಮುಖ ಪಾತ್ರವನ್ನು ವಹಿಸುವ ಸಾಧ್ಯತೆಯಂತೂ ಇದೆ.
ವಿಜಯಗೆ ಅಂತಿಮ ಪರೀಕ್ಷೆ
ಟಿವಿಕೆ ತನ್ನ ಚೊಚ್ಚಲ ಚುನಾವಣಾ ಪ್ರವೇಶದಲ್ಲೇ ಡಿಎಂಕೆ ಮತ್ತು ಎಐಎಡಿಎಂಕೆ ಪಾಬಲ್ಯವನ್ನು ಮುರಿದು ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ.
ವಿಜಯ ತನ್ನ ಏಕಾಂಗಿ ರಾಜಕೀಯ ಪಯಣಕ್ಕೆ ಬದ್ದರಾಗಿರುತ್ತಾರೆಯೇ ಅಥವಾ ಮೈತ್ರಿಯೊಂದಿಗೆ ಸರಕಾರ ರಚನೆಗೆ ಪ್ರಯತ್ನಿಸುತ್ತಾರೆಯೇ ಎನ್ನುವುದು ಈಗ ನಿರ್ಣಾಯಕ ಪ್ರಶ್ನೆಯಾಗಿದೆ. ಅವರು ಇರಿಸುವ ಯಾವುದೇ ಹೆಜ್ಜೆಯು ಅವರ ರಾಜಕೀಯ ವಿಶ್ವಾಸಾರ್ಹತೆ ಮತ್ತು ಟಿವಿಕೆಯ ಭವಿಷ್ಯವನ್ನು ನಿರ್ಧರಿಸಲಿದೆ.

