ಅಬುಧಾಬಿ: ಯುಎಇಯ ಪರಮಾಣು ವಿದ್ಯುತ್ ಸ್ಥಾವರದ ಬಳಿ ಭಾನುವಾರ ಡ್ರೋನ್ ದಾಳಿ ನಡೆದಿದ್ದು, ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ವಿಕಿರಣ ಸೋರಿಕೆಯ ಅಪಾಯ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ದೇಶದ ಪಶ್ಚಿಮ ಗಡಿ ಭಾಗದಿಂದ ಮೂರು ಡ್ರೋನ್‌ಗಳು ಹಾರಿ ಬಂದಿದ್ದು, ಅವುಗಳಲ್ಲಿ ಒಂದು ಬರಕಾ ಪರಮಾಣು ವಿದ್ಯುತ್ ಸ್ಥಾವರದ ಒಳ ಆವರಣದ ಹೊರಭಾಗದಲ್ಲಿರುವ ಜನರೇಟರ್‌ಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ' ಎಂದು ಯುಎಇಯ ರಕ್ಷಣಾ ಸಚಿವಾಲಯ ತಿಳಿಸಿದೆ.
'ದಾಳಿಯ ಮೂಲವನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು' ಎಂದು ಹೇಳಿದೆ.
ಇರಾಕ್‌ನಲ್ಲಿರುವ ಇರಾನ್ ಬೆಂಬಲಿತ ಸಶಸ್ತ್ರ ಬಂಡುಕೋರರು ಮತ್ತು ಯೆಮನ್‌ನಲ್ಲಿರುವ ಇರಾನ್ ಬೆಂಬಲಿತ ಹೂಥಿ ಬಂಡುಕೋರರು ಡ್ರೋನ್‌ಗಳನ್ನು ಹೊಂದಿದ್ದಾರೆ. ಆದರೆ, ಈ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.

