ಗುವಾಹಟಿ(PTI): ರಾಜ್ಯದಲ್ಲಿ 2023ರಲ್ಲಿ ನಡೆದ ಕ್ಷೇತ್ರಗಳ ಪುನರ್‌ವಿಂಗಡಣೆಯಿಂದಾಗಿ ಅಲ್ಪಸಂಖ್ಯಾತರ ಮತಬ್ಯಾಂಕ್ ಛಿದ್ರವಾಯಿತು. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಪಾಳಯ ಭರ್ಜರಿ ಜಯ ಸಾಧಿಸುವುದಕ್ಕೆ ಕಾರಣವಾದ ಅಂಶಗಳಲ್ಲಿ ಇದು ಪ್ರಮುಖವಾದದು ಎಂದು ವಿಶ್ಲೇಷಿಸಲಾಗುತ್ತಿದೆ.
126 ಸ್ಥಾನಗಳಲ್ಲಿ ಎನ್‌ಡಿಎ ಪಾಳಯ ದಾಖಲೆಯ 102 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. 2011ರ ಜನಸಂಖ್ಯೆ ಆಧಾರದಲ್ಲಿ 2023ರಲ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಲಾಗಿತ್ತು. ಈ ಪ್ರಕ್ರಿಯೆ ಬಳಿಕ ನಡೆದ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ.
ಈ ಮೊದಲಿನ ಕ್ಷೇತ್ರಗಳ ವ್ಯವಸ್ಥೆಯಂತೆ ಅಲ್ಪಸಂಖ್ಯಾತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದುಬರುತ್ತಿದ್ದರು. ಅದರಲ್ಲೂ, ಕಾಂಗ್ರೆಸ್ ಮತ್ತು ಎಐಯುಡಿಎಫ್ ಪಕ್ಷಗಳ ಅಭ್ಯರ್ಥಿಗಳ ಗೆಲುವಿನಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತಿತ್ತು.
2023ರಲ್ಲಿನ ಕ್ಷೇತ್ರಗಳ ಮರುವಿಂಗಡಣೆ ನಂತರ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳನ್ನು ಸ್ಥಳೀಯ ಸಮುದಾಯಗಳಿಗೆ ಮೀಸಲಿಡಲಾಗಿದೆ. ಈ ಬದಲಾವಣೆ, ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ನೆರವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಮುಖ ಅಂಶಗಳು
ಈ ಮೊದಲು ಅಲ್ಪಸಂಖ್ಯಾತರ ಮತಗಳು 35 ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿದ್ದವು. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಅಂತಹ ಕ್ಷೇತ್ರಗಳ ಸಂಖ್ಯೆ 25ಕ್ಕಿಂತ ಕಡಿಮೆಯಾಯಿತು
22 ಮುಸ್ಲಿಂ ಅಭ್ಯರ್ಥಿಗಳು ಸೇರಿ ವಿಪಕ್ಷಗಳು ಗೆದ್ದಿರುವ 24 ಕ್ಷೇತ್ರಗಳಲ್ಲಿ ಪುನರ್‌ವಿಂಗಡಣೆಯು ಯಾವುದೇ ಪರಿಣಾಮ ಬೀರಿಲ್ಲ
ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಒಟ್ಟು ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗದಿದ್ದರೂ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಹೆಚ್ಚು ಕ್ಷೇತ್ರಗಳನ್ನು ಮೀಸಲಿಡಲಾಗಿದೆ
ಪುನರ್‌ವಿಂಗಡಣೆಗೂ ಮುನ್ನ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಕ್ರಮವಾಗಿ 16 ಹಾಗೂ 8 ಕ್ಷೇತ್ರಗಳು ಮೀಸಲಾಗಿದ್ದವು. ಪುನರ್‌ವಿಂಗಡಣೆ ಬಳಿಕ ಇವುಗಳ ಸಂಖ್ಯೆ ಕ್ರಮವಾಗಿ 19 ಹಾಗೂ 9ಕ್ಕೆ ಏರಿಕೆಯಾಗಿವೆ
ಬಾರ್ಪೇಟಾ ಮತ್ತು ಗೋಲ್‌ಪಾರಾ(ಪಶ್ಚಿಮ) ಕ್ಷೇತ್ರಗಳಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಈ ಎರಡು ಕ್ಷೇತ್ರಗಳನ್ನು ಪುನರ್‌ವಿಂಗಡಣೆ ಬಳಿಕ ಕ್ರಮವಾಗಿ ಎಸ್‌ಸಿ ಮತ್ತು ಎಸ್‌ಟಿಗೆ ಮೀಸಲಿಡಲಾಗಿದೆ. ಹೀಗಾಗಿ ಈ ಕ್ಷೇತ್ರಗಳನ್ನು ಕಾಂಗ್ರೆಸ್‌ನಿಂದ ಕಿತ್ತುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

