ಮಧೂರು: ಮಧೂರು ಶ್ರೀ ಕಾಳಿಕಾಂಬಾ ಮಠದ ನೂತನ ಆಡಳಿತ ಸಮಿತಿಯ ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಶ್ರೀ ಮಠದ ಸಭಾಂಗಣದಲ್ಲಿ ಜರುಗಿತು. ಸಮಿತಿ ಹಾಲಿ ಅಧ್ಯಕ್ಷ ಪ್ರಭಾಕರ ಆಚಾರ್ಯ ಕೋಟೆಕಾರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಮಿತಿ ನೂತನ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಮಠ, ಕಂಬಾರು, ಪ್ರಧಾನ ಕಾರ್ಯದರ್ಶಿ ಅಮೈ ನಿರಂಜನ ಆಚಾರ್ಯ ವಿವೇಕಾನಂದನಗರ, ಕೋಶಾಧಿಕಾರಿ ಎತಡ್ಕ ಸುಂದರ ಆಚಾರ್ಯ ಬದಿಯಡ್ಕ ಅವರು ವಿದ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು. ಗುರುಪೀಠದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ಯ ಕಂಬಾರು, ಹಾಲಿ ಕಾರ್ಯದರ್ಶಿ ತಾರನಾಥ ಆಚಾರ್ಯ ಮಧೂರು ಹಾಗೂ ಹಾಲಿ ಕೋಶಾಧಿಕಾರಿ ಯೋಗೇಂದ್ರ ಆಚಾರ್ಯ ಪರಕ್ಕಿಲ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಗತ ಸಾಲಿನ ಲೆಕ್ಕಪತ್ರ ಹಾಗೂ ವಾರ್ಷಿಕ ವರದಿಯನ್ನು ಸಭೆಯ ಮುಂದೆ ಮಂಡಿಸಿ, ಸರ್ವಾನುಮತದ ಅನುಮೋದನೆ ಪಡೆಯಲಾಯಿತು. ಶ್ರೀ ಮಠದ ಬ್ರಹ್ಮಕಲಶೋತ್ಸವವನ್ನು ಮುಂದಿನ ವರ್ಷ ಅತ್ಯಂತ ವಿಜೃಂಭಣೆಯಿಂದ ನಡೆಸುವ ಕುರಿತು ನೂತನ ಸಮಿತಿ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಮಠದ ವ್ಯಾಪ್ತಿಗೆ ಬರುವ ವಿವಿಧ ಪ್ರಾಂತ್ಯಗಳಲ್ಲಿ ಶೀಘ್ರದಲ್ಲೇ ಸಭೆ ಆಯೋಜಿಸಿ, ಸಮಾಜಬಾಂಧವರಿಗೆ ಮಾಹಿತಿ ನೀಡುವ ಮತ್ತು ಒಗ್ಗೂಡಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ನೂತನ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ತಿಳಿಸಿದರು. ಜಗದೀಶ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ನಿರಂಜನ ಆಚಾರ್ಯ ವಂದಿಸಿದರು.



