ನವದೆಹಲಿ: ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSC) ಜಾರಿಗೊಳಿಸಿರುವ ಹೊಸ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 12ನೇ ತರಗತಿಯ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ PDF ಪ್ರತಿಗಳು ಅಸ್ಪಷ್ಟವಾಗಿದ್ದು ಓದಲು ಕಷ್ಟವಾಗುತ್ತಿದೆ ಎಂದು ಹಲವಾರು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಅಸ್ಪಷ್ಟವಾದ ಉತ್ತರ ಪತ್ರಿಕೆಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದು, ಇದರಿಂದ ಮೌಲ್ಯಮಾಪನದ ಗುಣಮಟ್ಟದ ಮೇಲೆಯೇ ಪ್ರಶ್ನೆಗಳು ಎದ್ದಿವೆ.
ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಗುಣಮಟ್ಟ ಕಳಪೆಯಾಗಿರುವುದರಿಂದ ಮೌಲ್ಯಮಾಪನದ ಮೇಲೆ ಪರಿಣಾಮ ಬೀರಿರಬಹುದು. ಇದರಿಂದಲೇ ಅನೇಕ ವಿದ್ಯಾರ್ಥಿಗಳಿಗೆ ನಿರೀಕ್ಷೆಗಿಂತ ಕಡಿಮೆ ಅಂಕಗಳು ಬಂದಿರಬಹುದು ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರಗಳಲ್ಲಿ ಬ್ಲರ್ ಆದ ಪುಟಗಳು, ತಿರುಗಿದ ಸ್ಕ್ಯಾನ್‌ಗಳು, ಅಸ್ಪಷ್ಟ ಕೈಬರಹ ಹಾಗೂ ಸರಿಯಾಗಿ ಕಾಣದ ಉತ್ತರಗಳು ಗೋಚರಿಸುತ್ತಿವೆ.
"ಪ್ರತಿಗಳನ್ನು ಎಷ್ಟು ಕೆಟ್ಟ ರೀತಿಯಲ್ಲಿ ಸ್ಕ್ಯಾನ್ ಮಾಡಲಾಗಿದೆ ಎಂದರೆ ನಮಗೇ ಓದಲು ಸಾಧ್ಯವಾಗುತ್ತಿಲ್ಲ. ಹಾಗಿದ್ದರೆ ಶಿಕ್ಷಕರು ಅದನ್ನು ಹೇಗೆ ಸರಿಯಾಗಿ ಮೌಲ್ಯಮಾಪನ ಮಾಡುತ್ತಾರೆ?" ಎಂದು ಒಬ್ಬ ವಿದ್ಯಾರ್ಥಿ ಘಿನಲ್ಲಿ ಪ್ರಶ್ನಿಸಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿ, "ಗುಣಮಟ್ಟದ ಪರಿಶೀಲನೆ ಮತ್ತು ಪಾರದರ್ಶಕತೆಯ ಅದ್ಭುತ ಉದಾಹರಣೆ ಇದು" ಎಂದು ವ್ಯಂಗ್ಯವಾಡಿದ್ದಾರೆ.
ಕೆಲ ವಿದ್ಯಾರ್ಥಿಗಳು, ಸರಿಯಾದ ಉತ್ತರಗಳನ್ನು ಬರೆದಿದ್ದರೂ ಅಂಕ ಕಡಿತ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
"ವಿದ್ಯಾರ್ಥಿಗಳು ಸರಿಯಾದ ಉತ್ತರಗಳನ್ನು ಬರೆದಿದ್ದರೂ ಅಂಕಗಳನ್ನು ಕಡಿತಗೊಳಿಸಲಾಗಿದೆ. ಈಗ ವಿದ್ಯಾರ್ಥಿಗಳು ಮೌಲ್ಯಮಾಪನ ವ್ಯವಸ್ಥೆಯನ್ನೇ ಅನುಮಾನಿಸಲು ಆರಂಭಿಸಿದ್ದಾರೆ" ಎಂದು ಮತ್ತೊಬ್ಬ ವಿದ್ಯಾರ್ಥಿ ಪೋಸ್ಟ್ ಮಾಡಿದ್ದಾರೆ.
OSM ವ್ಯವಸ್ಥೆ ಎಂದರೇನು?
ಈ ವರ್ಷ ಮೊದಲ ಬಾರಿಗೆ CBSE 12ನೇ ತರಗತಿ ಪರೀಕ್ಷೆಗಳ ಮೌಲ್ಯಮಾಪನಕ್ಕಾಗಿ OSM ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ವಿದ್ಯಾರ್ಥಿಗಳು ಎಂದಿನಂತೆ ಉತ್ತರ ಪತ್ರಿಕೆಯಲ್ಲಿ ಪರೀಕ್ಷೆ ಬರೆದಿದ್ದರು. ನಂತರ ಆ ಪತ್ರಿಕೆಗಳನ್ನು PDF ರೂಪಕ್ಕೆ ಸ್ಕ್ಯಾನ್ ಮಾಡಿ ಶಿಕ್ಷಕರು ಆನ್‌ಲೈನ್ ಮೂಲಕ ಮೌಲ್ಯಮಾಪನ ನಡೆಸಿದ್ದರು.
ಫಲಿತಾಂಶ ಪ್ರಕಟವಾದ ಬಳಿಕ ವಿಶೇಷವಾಗಿ ವಿಜ್ಞಾನ ವಿಭಾಗದ ಅನೇಕ ವಿದ್ಯಾರ್ಥಿಗಳು, ತಮ್ಮ ಶಾಲಾ ಸಾಧನೆ ಮತ್ತು ಆಂತರಿಕ ಮೌಲ್ಯಮಾಪನಕ್ಕೆ ಹೋಲಿಸಿದರೆ ಕಡಿಮೆ ಅಂಕಗಳು ಬಂದಿವೆ ಎಂದು ಆರೋಪಿಸಿದ್ದರು.
ರೇಖಾಚಿತ್ರಗಳು, ದೀರ್ಘ ಉತ್ತರಗಳು ಮತ್ತು ಕೈಬರಹದ ವಿವರಣೆಗಳು ಡಿಜಿಟಲ್ ಸ್ಕ್ಯಾನ್‌ನಲ್ಲಿ ಸ್ಪಷ್ಟವಾಗಿ ಕಾಣದಿರುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಆರೋಪ ತಳ್ಳಿಹಾಕಿದ ಸಿಬಿಎಸ್‌ಇ
ಈ ಕುರಿತು ಸ್ಪಷ್ಟನೆ ನೀಡಿರುವ ಸಿಬಿಎಸ್‌ಇ, ಸ್ಕ್ಯಾನಿಂಗ್ ಪ್ರಕ್ರಿಯೆ ಕಳಪೆಯಾಗಿತ್ತು ಎಂಬ ಆರೋಪಗಳನ್ನು ತಳ್ಳಿಹಾಕಿದೆ.
"ಸಮಯದ ಅಭಾವ ಮತ್ತು ಸಿದ್ಧತೆಯ ಕೊರತೆಯಿಂದ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್‌ನಲ್ಲಿ ದೋಷಗಳಾಗಿವೆ ಎಂಬ ಆರೋಪ ಸತ್ಯಕ್ಕೆ ದೂರವಾದುದು" ಎಂದು ಮಂಡಳಿ ತಿಳಿಸಿದೆ.
"ಸ್ಕ್ಯಾನಿಂಗ್, ಗುಣಮಟ್ಟ ಪರಿಶೀಲನೆ ಮತ್ತು ಮೌಲ್ಯಮಾಪನ ಸೇರಿದಂತೆ ಪ್ರತಿಯೊಂದು ಹಂತವೂ ನಿಗದಿತ ವಿಧಾನಗಳ ಪ್ರಕಾರ ಮಂಡಳಿಯ ಮೇಲ್ವಿಚಾರಣೆಯಲ್ಲಿ ನಡೆದಿದೆ" ಎಂದೂ ಹೇಳಿದೆ.
ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನ್ಯಾಯಯುತತೆ, ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಕಾಪಾಡಲಾಗಿದೆ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ.
ಮರುಮೌಲ್ಯಮಾಪನ ಪೋರ್ಟಲ್‌ನಲ್ಲೂ ಸಮಸ್ಯೆ
ಮರುಮೌಲ್ಯಮಾಪನ ಹಾಗೂ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಪ್ರತಿಗಳನ್ನು ಪಡೆಯಲು ತೆರೆಯಲಾದ ಸಿಬಿಎಸ್‌ಇ ಪೋರ್ಟಲ್‌ನಲ್ಲೂ ವಿದ್ಯಾರ್ಥಿಗಳು ತಾಂತ್ರಿಕ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ.
ಮೇ 19ರಿಂದ ವಿದ್ಯಾರ್ಥಿಗಳಿಗೆ ಸ್ಕ್ಯಾನ್ ಪ್ರತಿಗಳನ್ನು ಪಡೆಯಲು ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಲಾಗಿನ್ ಸಮಸ್ಯೆ, ಪಾವತಿ ವಿಫಲವಾಗುವುದು ಹಾಗೂ ಅರ್ಜಿಗಳು ಸಲ್ಲಿಕೆಯಾಗದಿರುವ ಬಗ್ಗೆ ಹಲವರು ದೂರಿದ್ದಾರೆ.
ಮೇ 20ರಂದು ವೆಬ್‌ಸೈಟ್‌ನಲ್ಲಿ "ತಾತ್ಕಾಲಿಕ ತಾಂತ್ರಿಕ ದೋಷ" ಉಂಟಾಗಿದೆ ಎಂದು ಸಿಬಿಎಸ್‌ಇ ಒಪ್ಪಿಕೊಂಡಿತ್ತು.
ಆದರೆ ಮಂಡಳಿಯ ಪ್ರಕಾರ, ಮೇ 20ರ ಸಂಜೆ 7.30ರೊಳಗೆ 1,27,146 ಅರ್ಜಿಗಳ ಮೂಲಕ 3,87,399 ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳ ಪ್ರತಿಗಳಿಗೆ ವಿದ್ಯಾರ್ಥಿಗಳು ಬೇಡಿಕೆ ಸಲ್ಲಿಸಿದ್ದಾರೆ.
ಇದರ ನಡುವೆಯೂ ಪಾವತಿಗಳು ಪೂರ್ಣಗೊಳ್ಳುತ್ತಿಲ್ಲ, ಅರ್ಜಿಗಳು ಸಲ್ಲಿಕೆಯಾಗುತ್ತಿಲ್ಲ ಹಾಗೂ ಪೋರ್ಟಲ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ.
ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಪ್ರತಿಕ್ರಿಯಿಸಿ, ಯಾವುದೇ ದೊಡ್ಡ ಮಟ್ಟದ ವೈಫಲ್ಯ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ತಾತ್ಕಾಲಿಕ ತಾಂತ್ರಿಕ ತೊಂದರೆ ಉಂಟಾದರೆ ವಿದ್ಯಾರ್ಥಿಗಳು ಬಳಿಕ ಮತ್ತೆ ಪ್ರಯತ್ನಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.

