ತಿರುವನಂತಪುರ: ಕೇರಳಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭೂತಪೂರ್ವ ಜಯ ಗಳಿಸಿದೆ. 140 ಸದಸ್ಯ ಬಲದ ವಿಧಾನಸಭೆಯಲ್ಲಿ 102 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ದಶಕದ ಬಳಿಕ ಅಧಿಕಾರಕ್ಕೆ ಮರಳಿದೆ. ಮತ್ತೊಂದೆಡೆ 'ಹ್ಯಾಟ್ರಿಕ್' ಕನಸು ಕಂಡಿದ್ದ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್‌ಗೆ ಭಾರಿ ಮುಖಭಂಗ ಎದುರಾಗಿದೆ.
ಫಲಿತಾಂಶಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಅಂಶ ಇಲ್ಲಿದೆ...
ಆಡಳಿತ ವಿರೋಧಿ ಅಲೆಯನ್ನು ಅನುಕೂಲಕರವಾಗಿ ಪರಿವರ್ತಿಸಿಕೊಂಡ ಹಾಗೂ ಒಗ್ಗಟ್ಟಿನಿಂದ ಹೋರಾಡಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳಂನಲ್ಲಿ ಮೇಲುಗೈ ಸಾಧಿಸಿದೆ. 63 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಕಾಂಗ್ರೆಸ್‌ಗೆ ಜೀವಸೆಲೆ...
ಕಳೆದೆರಡು ವರ್ಷಗಳಿಂದ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೈ ಪಾಳಯಕ್ಕೆ ಕೇರಳಂ ಗೆಲುವು ಜೀವಸೆಲೆಯಂತೆ ಒದಗಿ ಬಂದಿದೆ. ಈ ಮೂಲಕ ದಕ್ಷಿಣದಲ್ಲಿ ಮೂರನೇ ರಾಜ್ಯವನ್ನು ಪಕ್ಷ ಮುಡಿಗೇರಿಸಿಕೊಂಡಿದೆ. ಒಂದು ವೇಳೆ ಇಲ್ಲಿ ಸೋತಿದ್ದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟವನ್ನು ಮುನ್ನಡೆಸುವ ಅದರ ಸಾಮರ್ಥ್ಯದ ಬಗ್ಗೆ ಮತ್ತೆ ಪ್ರಶ್ನೆಗಳು ಮೂಡುತ್ತಿದ್ದವು.
ಎಲ್‌ಡಿಎಫ್‌ಗೆ ಹೀನಾಯ ಸೋಲು...
ಹೀನಾಯ ಸೋಲು ಕಂಡಿರುವ ಎಲ್‌ಡಿಎಫ್, 35 ಸ್ಥಾನಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಆದರೆ 20 ಸಚಿವರ ಪೈಕಿ 13 ಮಂದಿ ಸೋಲು ಕಂಡಿದ್ದಾರೆ.
ಏಕೈಕ ರಾಜ್ಯವನ್ನೂ ಕಳೆದುಕೊಂಡ ಎಲ್‌ಡಿಎಫ್...
ಕೇರಳಂನಲ್ಲಿ ಎಡಪಕ್ಷಗಳ ದಶಕದ ಆಡಳಿತ ಕೊನೆಗೊಂಡಿದೆ. ಈ ಫಲಿತಾಂಶದ ಮೂಲಕ ಆರು ದಶಕದಲ್ಲೇ ಮೊತ್ತ ಮೊದಲ ಬಾರಿಗೆ ಎಡಪಕ್ಷಗಳು ಯಾವುದೇ ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲದಂತಹ ಸನ್ನಿವೇಶ ನಿರ್ಮಾಣವಾಗಿದೆ.
ಬಿಜೆಪಿ ಗಮನಾರ್ಹ ಸಾಧನೆ...
ಕೇರಳಂನಲ್ಲಿ ದಶಕದ ಬಳಿಕ ಖಾತೆ ತೆರೆದಿರುವ ಬಿಜೆಪಿ, ಗಮನಾರ್ಹ ಸಾಧನೆ ಮಾಡಿದೆ. ರಾಜ್ಯದಲ್ಲಿ ನೇಮಂ, ಕಳಕೂಟ್ಟಂ ಹಾಗೂ ಚಾತ್ತನ್ನೂರ್ ಕ್ಷೇತ್ರಗಳಲ್ಲಿ ಗೆಲುವು ಸಾಧಿದ್ದು, ತಿರುವಲ್ಲ, ಪಾಲಕ್ಕಾಡ್, ಮಲಂಪುಝ, ಅಟ್ಟಿಂಗಲ್, ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳಲ್ಲಿ ಪಕ್ಷವು ಎರಡನೇ ಸ್ಥಾನ ಗಳಿಸಿದೆ.
ಮುಸ್ಲಿಂ ಲೀಗ್ ಸಾಧನೆ...
27 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), 22 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅಮೋಘ ಸಾಧನೆ ಮಾಡಿದೆ. ಅಲ್ಲದೆ ಯುಡಿಎಫ್ ಮೈತ್ರಿಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಮುಸ್ಲಿಂ ಲೀಗ್‌ನ ಮೊದಲ ಶಾಸಕಿ...
ಐಯುಎಂಎಲ್ ಅಭ್ಯರ್ಥಿ ಫಾತಿಮಾ ತಹ್ಲಿಯ ಅವರು ಪೆರಂಬ್ರಾ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂ ಪ್ರಮುಖ ನಾಯಕ ಟಿ.ಪಿ. ರಾಮಕೃಷ್ಣನ್ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಮುಸ್ಲಿಂ ಲೀಗ್ ಪಕ್ಷದ ಮೊದಲ ಶಾಸಕಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮುಂದಿನ ಸಿಎಂ ಯಾರು?
ಸಿಎಂ ರೇಸ್‌ನಲ್ಲಿ ಪ್ರಮುಖವಾಗಿಯೂ ಮೂವರು ನಾಯಕರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ. ವೇಣುಗೋಪಾಲ್ ಹೆಸರುಗಳು ಮುಂಚೂಣಿಯಲ್ಲಿವೆ.

ಕೇರಳ ಚುನಾವಣಾ ಫಲಿತಾಂಶ
ಮತ ಹಂಚಿಕೆ

ಮತ ಹಂಚಿಕೆ

