ನವದೆಹಲಿ: ಹರಿಯಾಣ ಸ್ಕೂಲ್ ಶಿಕ್ಷಾ ಪರಿಯೋಜನಾ ಪರಿಷದ್ (ಎಚ್ಎಸ್ಎಸ್ಪಿಪಿ) ಹಾಗೂ ಹರಿಯಾಣ ಕೃಷಿ ಮಾರುಕಟ್ಟೆ ಬೋರ್ಡ್ನ (ಎಚ್ಎಸ್ಎಎಂಬಿ) ಬ್ಯಾಂಕ್ ಖಾತೆಗಳಿಂದ ₹60.54 ಕೋಟಿ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕೇಂದ್ರಿಯ ತನಿಖಾ ಸಂಸ್ಥೆಯ (ಸಿಬಿಐ) ಅಧಿಕಾರಿಗಳು ಹಿರಿಯ ಐಎಎಸ್ ಅಧಿಕಾರಿಯನ್ನು ಬಂಧಿಸಿದ್ದಾರೆ.
ಶಿಕ್ಷಣ ಇಲಾಖೆ ಹಾಗೂ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಪಂಕಜ್ ಅಗರ್ವಾಲ್ ಬಂಧಿತ ಆರೋಪಿ.
'ಸರ್ಕಾರದ ನಿಯಾಮವಳಿಗಳನ್ನು ಉಲ್ಲಂಘಿಸಿ, ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಚಂಡೀಗಢದ ಸೆಕ್ಟರ್ 32ರ ಶಾಖೆಯಲ್ಲಿ ಇಲಾಖೆಯ ಖಾತೆ ತೆರೆದಿದ್ದ ಅಧಿಕಾರಿ, ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದರು. ವಂಚನೆ ವಹಿವಾಟಿನಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹60.54 ಕೋಟಿ ನಿವ್ವಳ ನಷ್ಟ ಉಂಟಾಗಿದೆ' ಎಂದು ಸಿಬಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗರ್ವಾಲ್ ಅವರನ್ನು ವಶಕ್ಕೆ ಪಡೆದ ಸಿಬಿಐನ ಅಧಿಕಾರಿಗಳು ಮಂಗಳವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಹರಿಯಾಣ ಸರ್ಕಾರದ ನಿರ್ದೇಶನದಂತೆ, ಸಿಬಿಐ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದೆ.
'ತನಿಖೆಯ ಸಂದರ್ಭದಲ್ಲಿ ಅಗರ್ವಾಲ್ ವಂಚನೆ ನಡೆಸಿದ್ದಕ್ಕೆ ಸಾಕಷ್ಟು ಸಾಕ್ಷ್ಯ ಸಂಗ್ರಹಿಸಲಾಗಿದೆ' ಎಂದು ಸಿಬಿಐನ ಅಧಿಕಾರಿಗಳು ತಿಳಿಸಿದ್ದಾರೆ.

