ಹೈದರಾಬಾದ್: ಆಂಧ್ರ ಪ್ರದೇಶದ ಅನಕಪಲ್ಲೆ ಜಿಲ್ಲೆಯ ವಿಶಾಖಪಟ್ಟಣಂ ಉಕ್ಕಿನ ಸ್ಥಾವರದಲ್ಲಿ (ವಿಎಸ್‌ಪಿ) ಸೋಮವಾರ ಸಂಜೆ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 8 ಮಂದಿ ಕಾರ್ಮಿಕರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಉಕ್ಕನ್ನು ಕರಗಿಸುವ ಘಟಕದಲ್ಲಿನ ಉಷ್ಣ ನಿರೋಧಕ ಕೊಳಗದಿಂದ ದ್ರವ ರೂಪದ ಲೋಹ ಸೋರಿಕೆಯಾಗಿರುವ ಪರಿಣಾಮ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆ ನಡೆದಾಗ 20 ಮಂದಿ ಕಾರ್ಮಿಕರು ಸ್ಥಳದಲ್ಲಿದ್ದರು. ಈ ಪೈಕಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 8 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮೃತಪಟ್ಟಿರುವವರು ಕಾರ್ಖಾನೆಯ ಕಾರ್ಮಿಕರೋ, ಹೊರಗುತ್ತಿಗೆ ನೌಕರರೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಕಾರ್ಮಿಕ ಸಂಘಟನೆ ತಿಳಿಸಿದೆ. ಅವಘಡಕ್ಕೆ ನಿಜವಾದ ಕಾರಣ ಪತ್ತೆಹಚ್ಚಲು ಸೂಕ್ತ ತನಿಖೆ ನಡೆಸಬೇಕೆಂದೂ ಆಗ್ರಹಿಸಿದೆ.

