ರುದ್ರಪ್ರಯಾಗ : ಇಲ್ಲಿನ ಗುರುದ್ವಾರವೊಂದರ ಚಾವಣಿಯ ಮೇಲೆ ನಿಹಾಂಗ್ (ಅಕಾಲಿ) ಸಮುದಾಯದ ಶಸ್ತ್ರಸಜ್ಜಿತ ಗುಂಪೊಂದು ಸೇರಿಕೊಂಡು, ಆ ಸ್ಥಳವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಕಾರಣದಿಂದ ಸೇನಾಪಡೆಯು ಸ್ಥಳಕ್ಕೆ ಬಂದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಜೂನ್ 20ರಂದು ಸಂಜೆ ಗುರುದ್ವಾರಕ್ಕೆ ನುಗ್ಗಿ, ಚಾವಣಿಯ ಮೇಲೆ ಸೇರಿಕೊಂಡಿದ್ದ ಗುಂಪಿನ ಸದಸ್ಯರು 40 ಗಂಟೆಯ ಬಳಿಕವೂ ಅಲ್ಲೇ ಇದ್ದಾರೆ.
'ಪೊಲೀಸರು ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸರು (ಐಟಿಬಿಪಿ) ಸ್ಥಳದಲ್ಲಿ ಬೀಡುಬಿಟ್ಟಿದ್ದು, ಗುಂಪಿನ ಸದಸ್ಯರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಪ್ರಯತ್ನವು ಫಲಪ್ರದವಾಗಿದ್ದು, ಗುಂಪಿನ ಸದಸ್ಯರೊಬ್ಬರು ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಮಾತುಕತೆ ನಡೆಸಲು ಕೆಳಕ್ಕೆ ಇಳಿದು ಬಂದಿದ್ದಾರೆ. ಉಳಿದವರ ಮನವೊಲಿಕೆಗೆ ಮಾತುಕತೆ ನಡೆಯುತ್ತಿದೆ' ಎಂದು ರುದ್ರಪ್ರಯಾಗದ ಪೊಲೀಸ್ ವರಿಷ್ಠಾಧಿಕಾರಿ ನಿಹಾರಿಕಾ ತೋಮರ್ ಮಾಹಿತಿ ನೀಡಿದ್ದಾರೆ.
'ಹೇಮಕುಂಡ ಸಾಹಿಬ್ ಯಾತ್ರೆ ಶಾಂತಿಯುತವಾಗಿ ನಡೆಯುತ್ತಿದೆ. ಗುರುದ್ವಾರದಲ್ಲಿಯೂ ಪ್ರಾರ್ಥನೆ ಹಾಗೂ ಅನ್ನದಾಸೋಹ ಎಂದಿನಂತೆ ನಡೆದಿದೆ' ಎಂದು ರುದ್ರಪ್ರಯಾಗ ಜಿಲ್ಲಾಧಿಕಾರಿ ವಿಶಾಲ್ ಮಿಶ್ರಾ ತಿಳಿಸಿದ್ದಾರೆ.
ವ್ಯಕ್ತಿಯೊಬ್ಬರನ್ನು ಸ್ವಲ್ಪ ಸಮಯ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಗುಂಪು, ಬಳಿಕ ಅವರನ್ನು ಬಿಡುಗಡೆ ಮಾಡಿದೆ ಎಂದು ಗುರುದ್ವಾರದ ಉಸ್ತುವಾರಿ ಸರ್ದಾರ್ ಬೇಅಂತ್ ಸಿಂಗ್ ತಿಳಿಸಿದ್ದಾರೆ.

