ಮುಂಬೈ (PTI): 'ಶಿವಸೇನಾ ಯುಬಿಟಿ ಬಣವನ್ನು ಇನ್ನು ಮುಂದೆ ಯುವ ಮುಖಂಡ, ಶಾಸಕ ಆದಿತ್ಯ ಠಾಕ್ರೆ ಮುನ್ನಡೆಸಲಿದ್ದಾರೆ. ಅವರಿಗೆ ಆ ಸಾಮರ್ಥ್ಯವಿದೆ' ಎಂದು ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
'ಶಿವಸೇನಾ (ಯುಬಿಟಿ) ತೊರೆದ ಸಂಸದರು ಪ್ರತಿನಿಧಿಸುತ್ತಿದ್ದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಮುಖಂಡ ಉದ್ಧವ್ ಠಾಕ್ರೆ ಪ್ರವಾಸ ಹಮ್ಮಿಕೊಂಡಿದ್ದು, ಇದರ ಬಗ್ಗೆ ಸಂಜಯ್ ರಾವುತ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದರು.
'ಆರು ಮಂದಿ ಭಿನ್ನಮತೀಯರು ಪಕ್ಷ ತೊರೆದರೂ, ಪಕ್ಷವು ಬಲಿಷ್ಠವಾಗಿಯೇ ಉಳಿದಿದೆ. ತಳಮಟ್ಟದ ಕಾರ್ಯಕರ್ತರು, ಬೆಂಬಲಿಗರು ಪಕ್ಷದ ಜತೆಗೇ ಇದ್ದಾರೆ. ಪಕ್ಷ ತೊರೆದವರು ತಮ್ಮನ್ನು ತಾವು ಕೋಟ್ಯಂತರ ರೂಪಾಯಿಗೆ ಮಾರಿಕೊಂಡಿದ್ದಾರೆ. ಇಂಥವರಿಗೆ 'ಬಂಡಾಯಗಾರರು' ಎಂಬ ಪದ ಬಳಕೆ ಸೂಕ್ತವಲ್ಲ. ಭಗತ್‌ಸಿಂಗ್, ಸುಖದೇವ್ ಅವರಂತ ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಈ ಪದವನ್ನು ಮೀಸಲಿಡಬೇಕೇ ಹೊರತು, ಹಣ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದ ರಾಜಕಾರಣಿಗಳಿಗೆ ಈ ಪದವನ್ನು ಬಳಸಬಾರದು' ಎಂದರು.
ಆದಿತ್ಯ ಠಾಕ್ರೆ ಪಕ್ಷವನ್ನು ಮುನ್ನಡೆಸಲು ಸಮರ್ಥರಿದ್ದಾರೆಯೇ ಎಂಬ ಪ್ರಶ್ನೆಗೆ, 'ಯುವ ಮುಖಂಡರು ಪಕ್ಷದ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಬೇಕು. ನಾವು ಈಗಾಗಲೇ ನಾಲ್ಕು ದಶಕಗಳಿಂದ ಕೆಲಸ ಮಾಡುತ್ತಿದ್ದೇವೆ. ಇದು ಇನ್ನೆಷ್ಟು ದಿನ ಸಾಧ್ಯ? ಆದಿತ್ಯ ಅವರಿಗೆ ಈ ಸಾಮರ್ಥ್ಯವಿದೆ. ಅವರು ಅಧಿಕೃತವಾಗಿ ಪಕ್ಷದ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ' ಎಂದರು.
'ಶಿಂದೆ ಬಣಕ್ಕೆ ಸೇರ್ಪಡೆಗೊಂಡಿರುವ ಆರು ಸಂಸದರು ಹಣ, ಅಧಿಕಾರ ಮತ್ತು ರಕ್ಷಣೆಗಾಗಿ ತಮ್ಮ ನಿಷ್ಠೆ ಬದಲಿಸಿಕೊಂಡಿದ್ದಾರೆ' ಎಂದ ರಾವುತ್, 'ಪಕ್ಷದ ಕಾರ್ಯಕರ್ತರು, ಮತದಾರರಿಗೆ ಪಕ್ಷದಲ್ಲಿ ನಡೆದ ಇತ್ತೀಚಿನ ಬೆಳವಣಿಗಳ ಕುರಿತು ಸ್ಪಷ್ಟ ಮಾಹಿತಿ ನೀಡಲು ಉದ್ಧವ್ ಠಾಕ್ರೆ ಲೋಕಸಭಾ ಕ್ಷೇತ್ರಗಳಿಗೆ ಪ್ರವಾಸ ಹಮ್ಮಿಕೊಂಡಿದ್ದಾರೆ' ಎಂದರು.
'ಬಾಳಾಸಾಹೇಬ್ ಠಾಕ್ರೆ ಸಿದ್ಧಾಂತಕ್ಕೆ ಬದ್ಧ'
ಉದ್ಧವ್ ಠಾಕ್ರೆ ಅವರ ನಾಲ್ಕು ಲೋಕಸಭಾ ಕ್ಷೇತ್ರಗಳ ಪ್ರವಾಸ ಮುಗಿದ ಬಳಿಕ, ಶಿಂದೆ ಬಣಕ್ಕೆ ಸೇರ್ಪಡೆಗೊಂಡ ಸಂಸದರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕಾದರೆ ಅವರಿಗೆ ಜೆಡ್ ಪ್ಲಸ್ ಭದ್ರತೆ ಬೇಕಾಗುತ್ತದೆ. ಅವರ ವಿರುದ್ಧ ಜನಾಕ್ರೋಶ ಆ ಮಟ್ಟಿಗೆ ಇದೆ ಎಂದು ರಾವುತ್ ಹೇಳಿದರು.
ಪಕ್ಷ ತೊರೆದವರು ನಿಮ್ಮ ನಿರ್ಧಾರವನ್ನು ಟೀಕಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ರಾವುತ್, 'ನಾನು ಯಾವಾಗಲೂ ಪಕ್ಷ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತಕ್ಕೆ ಬದ್ಧನಾಗಿದ್ದೇನೆ. ಅವರು ಇದನ್ನು ಮುರಿಯಲು ಸಾಕಷ್ಟು ಬಾರಿ ಪ್ರಯತ್ನಿಸಿದರು. ನಾನು ಅದನ್ನು ತಡೆಯಲು ಪ್ರಯತ್ನಿಸಿದೆ' ಎಂದರು.
'ಆಪರೇಷನ್ ಟೈಗರ್ 3.0 ಆರಂಭ'
ಮುಂಬೈ: ಮಹಾವಿಕಾಸ್ ಆಘಾಡಿ (ಎಂವಿಎ) ಬಣದಿಂದ ಶಾಸಕರನ್ನು ಸೆಳೆಯುವ ಭಾಗವಾಗಿ ಏಕನಾಥ ಶಿಂದೆ ಅವರು ಆಪರೇಷನ್ ಟೈಗರ್ 3.0 ಕಾರ್ಯಾಚರಣೆ ಆರಂಭಿಸಿದ್ದಾರೆ. ಇತ್ತೀಚೆಗೆ ನಡೆದ ನಿರ್ಣಾಯಕ ಸಭೆಗೆ 23 ಶಾಸಕರು ಗೈರು ಹಾಜರಾದಾಗಲೇ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಮತ್ತು ಕಾಂಗ್ರೆಸ್ ಒಳಗೊಂಡ ಎಂವಿಎ ಮೈತ್ರಿಕೂಟದಲ್ಲಿನ ಬಿರುಕು ಬಹಿರಂಗಗೊಂಡಿತ್ತು. 'ಆಪರೇಷನ್ 3.0 ಆರಂಭಗೊಂಡಿದೆ. ಸುಮ್ಮನೆ ಕಾದು ನೋಡಿ ಶೀಘ್ರದಲ್ಲೇ 14ಕ್ಕೂ ಹೆಚ್ಚು ಶಾಸಕರು ಶಿಂದೆ ಬಣಕ್ಕೆ ಸೇರ್ಪಡೆಗೊಳ್ಳಲಿದ್ದಾರೆ' ಎಂದು ಶಿವಸೇನಾ (ಶಿಂದೆ ಬಣ) ಮುಖಂಡ ಗುಲಾಬ್‌ರಾವ್ ಪಾಟೀಲ್ ಹೇಳಿದ್ದಾರೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವಸೇನಾ (ಯುಬಿಟಿ) 20 ಕಾಂಗ್ರೆಸ್ 10 ಎನ್‌ಸಿಪಿ (ಎಸ್‌ಪಿ) 10 ಸದಸ್ಯ ಬಲ ಹೊಂದಿದೆ. ವಿಧಾನ ಪರಿಷತ್‌ನಲ್ಲಿ ಶಿವಸೇನಾ 6 ಕಾಂಗ್ರೆಸ್ ಮತ್ತು ಎನ್‌ಸಿಪಿ ತಲಾ ಎರಡು ಸದಸ್ಯ ಬಲ ಹೊಂದಿದೆ.

