ನವದೆಹಲಿ: 12ನೇ ತರಗತಿ ಪರೀಕ್ಷೆಯ ಒಎಸ್‌ಎಂ (ಆನ್ ಸ್ಕ್ರೀನ್ ಮಾರ್ಕಿಂಗ್) ವ್ಯವಸ್ಥೆ ಅಳವಡಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ (ಎನ್‌ಎಸ್‌ಯುಐ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಈ ಕುರಿತು ತನ್ನ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ತಿಳಿಸಿದೆ.
ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ರಜಾಕಾಲದ ನ್ಯಾಯಪೀಠದ ನ್ಯಾಯಮೂರ್ತಿಗಳಾದ ನೀನಾ ಬನ್ಸಲ್ ಕೃಷ್ಣ ಹಾಗೂ ಮಧು ಜೈನ್, ಈ ಕುರಿತು ತಮ್ಮ ಪ್ರತಿಕ್ರಿಯೆಗಳನ್ನು ಜೂನ್ 12ರ ಒಳಗಾಗಿ ಸಲ್ಲಿಸುವಂತೆ ಸಿಬಿಎಸ್‌ಇ ಹಾಗೂ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ ನೋಟಿಸ್ ಜಾರಿಮಾಡಿದೆ.
'ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಸಲ್ಲಿಸುವ ಹಾಗೂ ಉತ್ತರ ಪತ್ರಿಕೆಯನ್ನು ಪಡೆಯುವ ಪೋರ್ಟಲ್ ಅನ್ನು ಜೂನ್ 7ರಂದೇ ಸ್ಥಗಿತಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಒಂದು ತಿಂಗಳ ಕಾಲ ತೆರೆದಿಡಬೇಕು' ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಇದಕ್ಕೆ ಉತ್ತರಿಸಿದ ಸಿಬಿಎಸ್‌ಇ ಪರ ವಕೀಲ ಎಂ.ಎ.ನಿಯಾಜ್, 'ಪೋರ್ಟಲ್ ಅನ್ನು ಮುಚ್ಚುವ ಗಡುವನ್ನು ಅಧಿಕಾರಿಗಳು ಕಾಲಕಾಲಕ್ಕೆ ವಿಸ್ತರಿಸಿದ್ದಾರೆ. ವಿದ್ಯಾರ್ಥಿಗಳ ಕುಂದುಕೊರತೆ ಹಾಗೂ ಸಮಸ್ಯೆಯನ್ನು ಬಗೆಹರಿಸಲಾಗಿದೆ' ಎಂದು ನ್ಯಾಯಪೀಠದ ಗಮನಸೆಳೆದರು.
'ರಾಜಕೀಯ ಪಕ್ಷವೊಂದರ ವಿದ್ಯಾರ್ಥಿ ಘಟಕವು ಪಿಐಎಲ್ ಸಲ್ಲಿಸಿದೆ. ಶಿಕ್ಷಣ ವ್ಯವಸ್ಥೆಯನ್ನು ರಾಜಕೀಯಕರಣಗೊಳಿಸಲು ಅವಕಾಶ ನೀಡುವುದಿಲ್ಲ' ಎಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ಎನ್‌ಎಸ್‌ಯುಐ ಪರ ಹಾಜರಾಗಿದ್ದ ವಕೀಲ ರಿಶವ್ ರಂಜನ್, ಅಪ್ರಾಪ್ತ ವಯಸ್ಸಿನವರ ಪರವಾಗಿ ಪಿಐಎಲ್ ಸಲ್ಲಿಸಲಾಗಿದೆ. ರಾಜಕೀಯ ಪಕ್ಷದೊಂದಿಗೆ ನಂಟು ಹೊಂದಿದೆ ಎಂಬ ಕಾರಣಕ್ಕೆ ಅರ್ಜಿ ಅನರ್ಹಗೊಳಿಸಬೇಕಿಲ್ಲ ಎಂದು ಗಮನಸೆಳೆದರು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಪೀಠ, ಈ ಕುರಿತಂತೆ ಕೇಂದ್ರ ಸರ್ಕಾರ, ಸಿಬಿಎಸ್‌ಇಗೆ ನೋಟಿಸ್ ಜಾರಿಗೊಳಿಸಿ, ಉತ್ತರಿಸುವಂತೆ ಕೇಳಿದೆ.

