ನವದೆಹಲಿ: ಬಾಡಿಗೆದಾರರು ನಿರ್ಮಿಸಿರುವ ರಾಸಾಯನಿಕ ಘಟಕದಿಂದ ಪರಿಸರಕ್ಕೆ ಉಂಟಾಗುವ ಹಾನಿಗೆ ಭೂಮಾಲೀಕರು ಹೊಣೆಗಾರರಲ್ಲ ಎಂಬ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ(ಎನ್‌ಜಿಟಿ) ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.
ನ್ಯಾಯಮಂಡಳಿ ಆದೇಶವನ್ನು ಪ್ರಶ್ನಿಸಿ ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿ(ಜಿಪಿಸಿಬಿ) ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮ ಮತ್ತು ಸಂಜೀವ್ ಸಚ್‌ದೇವ ಅವರ ನ್ಯಾಯಪೀಠವು, 2025ರ ನವೆಂಬರ್ 14ರಂದು ನ್ಯಾಯಮಂಡಳಿ ನೀಡಿದ್ದ ಆದೇಶದ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ಸೂರತ್‌ನ ಜಗ್‌ಮೋಹನ್ ಲಚಿರಾಮ್ ಜಾಲಾನ್ ಎಂಬವರಿಗೆ ಸೇರಿದ ಕಟ್ಟಡದಲ್ಲಿ, ಮಾರ್ಗಸೂಚಿಗಳನ್ನು ಪಾಲಿಸದೇ ರಾಸಾಯನಿಕ ಉತ್ಪಾದನೆ ಮಾಡುತ್ತಿದ್ದ ಘಟಕವನ್ನು ಜಿಪಿಸಿಬಿ ಮುಚ್ಚಿಸಿತ್ತು. ಜಾಗದ ಮಾಲೀಕ ಜಾಲಾನ್ ಅವರಿಗೆ ₹25 ಲಕ್ಷ ದಂಡ ವಿಧಿಸಿತ್ತು.
'2020ರಲ್ಲಿ ಒಪ್ಪಂದದ ಅಡಿಯಲ್ಲಿ ಖಾಸಗಿ ಕಂಪನಿಯ ನಿರ್ದೇಶಕರೊಬ್ಬರಿಗೆ ಭೂಮಿಯನ್ನು ಬಾಡಿಗೆಗೆ ನೀಡಿದ್ದು, ಅವರು ಪರವಾನಗಿ ಪಡೆಯದೇ ಘಟಕ ನಿರ್ವಹಿಸುತ್ತಿದ್ದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ' ಎಂದು ವಾದಿಸಿದ ಜಾಲಾನ್, ಬಾಡಿಗೆದಾರರ ವಿರುದ್ಧ ದೂರು ದಾಖಲಿಸಿದ್ದರು ಮತ್ತು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಗುಜರಾತ್ ಹೈಕೋರ್ಟ್ ನಿರ್ದೇಶನದಂತೆ ತನ್ನ ನಿರ್ಧಾರವನ್ನು ಮರುಪರಿಶೀಲಿಸಿದ ಮಾಲಿನ್ಯ ಮಂಡಳಿಯು ದಂಡ ವಿಧಿಸಿರುವುದನ್ನು ಸಮರ್ಥಿಸಿಕೊಂಡಿತ್ತು.
ಈ ಕುರಿತು ವಿಚಾರಣೆ ನಡೆಸಿದ್ದ ಎನ್‌ಜಿಟಿ, 'ಬಾಡಿಗೆಗೆ ನೀಡಲಾದ ಭೂಮಿಯಲ್ಲಿದ್ದ ಘಟಕದಿಂದ ಉಂಟಾದ ಪರಿಸರ ಹಾನಿಗೆ ಮಾಲೀಕ ಜಾಲಾನ್ ಅವರಿಂದ ದಂಡ ಪಾವತಿ ಮಾಡಿಸಿಕೊಳ್ಳುವಂತಿಲ್ಲ' ಎಂದು ಆದೇಶಿಸಿತ್ತು.

