ನವದೆಹಲಿ: ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆ ಶ್ಯೂಗು ಅವರನ್ನು ಭೇಟಿಯಾಗಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯದ ಪ್ರಗತಿಯ ಕುರಿತು ಪರಿಶೀಲಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ 16ನೇ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯ ನಡುವೆ ಈ ಭೇಟಿ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 'ಬ್ರಿಕ್ಸ್ ಚೌಕಟ್ಟಿನ ಅಡಿಯಲ್ಲಿ ರಷ್ಯಾ ಮಂಡಿಸಿದ ಪ್ರಸ್ತಾಪಗಳು ಸೇರಿದಂತೆ ಉಭಯ ನಾಯಕರು ಸಹಕಾರ ವೃದ್ಧಿಯ ಕುರಿತು ಪರಿಶೀಲನೆ ನಡೆಸಿದ್ದಾರೆ' ಎಂದು ತಿಳಿಸಿದ್ದಾರೆ.
ಈ ಮೊದಲು ಚೀನಾದ ವಿದೇಶಾಂಗ ಸಿಚವ ವಾಂಗ್ ಯಿ ಅವರನ್ನು ಭೇಟಿಯಾಗಿದ್ದ ಡೊಭಾಲ್, ಪ್ರಮುಖ ವಿಷಯಗಳಲ್ಲಿ ಸೂಕ್ಷ್ಮತೆಯನ್ನು ಪ್ರದರ್ಶಿಸುವ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದರು.

