HEALTH TIPS

ಭಾರತದ ಅಂತರ್ಜಲ ಬಿಕ್ಕಟ್ಟು: ಅತಿ ಹೆಚ್ಚು ಬಾಧಿತ ನಗರಗಳ ಪಟ್ಟಿಯಲ್ಲಿ ಹೈದರಾಬಾದ್ ಮೊದಲ ಸ್ಥಾನದಲ್ಲಿರಲು ಕಾರಣಗಳೇನು?

 ಭಾರತದ ಅಂತರ್ಜಲ ಬಿಕ್ಕಟ್ಟು ದಿನದಿಂದ ದಿನಕ್ಕೆ ಗಂಭೀರ ರೂಪ ಪಡೆಯುತ್ತಿದ್ದು, ದೇಶದ ಹಲವು ಭಾಗಗಳಲ್ಲಿ ಅಂತರ್ಜಲ ಮಟ್ಟ ಕುಸಿತ, ಕುಡಿಯುವ ನೀರಿನ ಅಭಾವ ಮತ್ತು ನೀರು ಕಲುಷಿತಗೊಳ್ಳುತ್ತಿರುವ ಆತಂಕಕಾರಿ ವರದಿಗಳು ಕೇಳಿಬರುತ್ತಿವೆ. ಕೇಂದ್ರ ಜಲಶಕ್ತಿ ಸಚಿವಾಲಯ ಬಿಡುಗಡೆ ಮಾಡಿರುವ 'ಡೈನಾಮಿಕ್ ಗ್ರೌಂಡ್‌ವಾಟರ್ ರಿಸೋರ್ಸ್ ಅಸೆಸ್‌ಮೆಂಟ್ ರಿಪೋರ್ಟ್-2025' ಪ್ರಕಾರ, ಪ್ರಮುಖ ಮಹಾನಗರಗಳ ಪೈಕಿ ಹೈದರಾಬಾದ್ ದೇಶದಲ್ಲೇ ಅತ್ಯಂತ ಹೆಚ್ಚು ಅಂತರ್ಜಲ ಕುಸಿತ ಕಂಡ ನಗರವಾಗಿ ಹೊರಹೊಮ್ಮಿದೆ.


ಈ ವಿಷಯದಲ್ಲಿ ಅದು ದಿಲ್ಲಿ ಮತ್ತು ಮುಂಬೈನಂತಹ ದೊಡ್ಡ ನಗರಗಳನ್ನೂ ಹಿಂದಿಕ್ಕಿದೆ.

ಅತಿಯಾದ ಅಂತರ್ಜಲ ಬಳಕೆಯಿಂದಾಗಿ ಗ್ರೇಟರ್ ಹೈದರಾಬಾದ್ ವ್ಯಾಪ್ತಿಯ ರಂಗಾರೆಡ್ಡಿ ಮತ್ತು ಮೇಡ್ಚಲ್-ಮಲ್ಕಾಜ್‌ ಗಿರಿ ಜಿಲ್ಲೆಗಳ ಪ್ರದೇಶಗಳು ಸೇರಿದಂತೆ ಒಟ್ಟು 26 ಮಂಡಲಗಳು ಮತ್ತು ತಹಶೀಲಗಳನ್ನು 'ಅಪಾಯಕಾರಿ' ಅಥವಾ 'ಅತಿಯಾದ ಬಳಕೆಯಾಗಿರುವ' ವಲಯಗಳು ಎಂದು ವರದಿಯಲ್ಲಿ ವರ್ಗೀಕರಿಸಲಾಗಿದೆ. ಭಾರತದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಹೈದರಾಬಾದ್‌ ನಲ್ಲಿಯೇ ಇಂತಹ ಅಪಾಯಕಾರಿ ವಲಯಗಳ ಸಂಖ್ಯೆ ಅತ್ಯಂತ ಹೆಚ್ಚಾಗಿದೆ.

ಸುಮಾರು 3.3 ಕೋಟಿ ಜನಸಂಖ್ಯೆ ಹೊಂದಿರುವ ದಿಲ್ಲಿಯಲ್ಲಿ ಇಂತಹ 21 ವಲಯಗಳಿದ್ದರೆ, ಬೆಂಗಳೂರಿನಲ್ಲಿ 16 ವಲಯಗಳಿವೆ. ಗ್ರೇಟರ್ ಹೈದರಾಬಾದ್‌ ನಲ್ಲಿ ಅಂತರ್ಜಲದ ತೀವ್ರ ಅಭಾವವಿರುವ ವಲಯಗಳ ಸಾಂದ್ರತೆಯು ಆಂಧ್ರಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ದೊಡ್ಡ ರಾಜ್ಯಗಳಿಗಿಂತಲೂ ಹೆಚ್ಚಾಗಿದೆ.

►ಹೈದರಾಬಾದ್ ಜಿಲ್ಲೆಯಲ್ಲಿ ಒಂದೂ 'ಸುರಕ್ಷಿತ' ಅಂತರ್ಜಲ ವಲಯವಿಲ್ಲ!

ಈ ವರದಿ ಹೈದರಾಬಾದ್ ಜಿಲ್ಲೆಯ ಬಗ್ಗೆ ಅತ್ಯಂತ ಕಳವಳಕಾರಿ ಚಿತ್ರಣವನ್ನು ತೆರೆದಿಟ್ಟಿದೆ. ಇಲ್ಲಿನ ಒಟ್ಟು 16 ಅಂತರ್ಜಲ ಮೌಲ್ಯಮಾಪನ ವಲಯಗಳ ಪೈಕಿ ಒಂದೂ ಕೂಡ 'ಸುರಕ್ಷಿತ' ವರ್ಗದ ಅಡಿಯಲ್ಲಿ ಬಂದಿಲ್ಲ. ಕೇವಲ ಒಂದು ವಲಯವನ್ನು ಮಾತ್ರ 'ಅರ್ಧ-ಅಪಾಯಕಾರಿ' ಎಂದು ವರ್ಗೀಕರಿಸಲಾಗಿದ್ದು, ಉಳಿದ 15 ವಲಯಗಳನ್ನು 'ಅಪಾಯಕಾರಿ' ಅಥವಾ 'ಅತಿಯಾದ ಬಳಕೆಯಾಗಿರುವ' ಕಠಿಣ ವರ್ಗಕ್ಕೆ ಸೇರಿಸಲಾಗಿದೆ. ಖೈರತಾಬಾದ್, ಅಮೀರ್ ಪೇಟ್, ಹಿಮಾಯತ್‌ನಗರ, ಬಾಚುಪಲ್ಲಿ, ಶೇರಿಲಿಂಗಂಪಲ್ಲಿ, ಹಯಾತ್‌ನಗರ ಮತ್ತು ಸರೂರ್‌ ನಗರದಂತಹ ಪ್ರದೇಶಗಳು ಈ ಬಿಕ್ಕಟ್ಟಿನಿಂದ ತೀವ್ರವಾಗಿ ತತ್ತರಿಸಿವೆ.

ಕೇಂದ್ರ ಅಂತರ್ಜಲ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ, ಲಭ್ಯವಿರುವ ಅಂತರ್ಜಲದಲ್ಲಿ ಶೇ.70ಕ್ಕಿಂತ ಕಡಿಮೆ ಬಳಸುವ ಪ್ರದೇಶಗಳನ್ನು 'ಸುರಕ್ಷಿತ' ಎಂದು ಪರಿಗಣಿಸಲಾಗುತ್ತದೆ. ಶೇ.71ರಿಂದ 90ರಷ್ಟು ಬಳಸುವ ಪ್ರದೇಶಗಳನ್ನು 'ಅರ್ಧ-ಅಪಾಯಕಾರಿ', ಶೇ.90ರಿಂದ 100ರಷ್ಟಿದ್ದರೆ 'ಅಪಾಯಕಾರಿ' ಮತ್ತು ಶೇ.100ಕ್ಕಿಂತ ಹೆಚ್ಚು ಅಂತರ್ಜಲ ಬಳಸುವ ಪ್ರದೇಶಗಳನ್ನು 'ಅತಿಯಾದ ಬಳಕೆಯಾದ' ವಲಯಗಳು ಎಂದು ವರ್ಗೀಕರಿಸಲಾಗುತ್ತದೆ.

►ಅತಿಯಾದ ಬೋರ್‌ ವೆಲ್ ಕೊರೆಯುವಿಕೆ ಮತ್ತು ನಗರೀಕರಣದಿಂದ ಹೆಚ್ಚಿದ ಬಿಕ್ಕಟ್ಟು

ವೇಗದ ನಗರೀಕರಣ, ವಿಸ್ತಾರವಾದ ಕಟ್ಟಡ ನಿರ್ಮಾಣ ಚಟುವಟಿಕೆಗಳು ಮತ್ತು ನಗರದಾದ್ಯಂತ ವ್ಯಾಪಕವಾಗಿ ಬೋರ್‌ ವೆಲ್‌ ಗಳನ್ನು ಕೊರೆಯುತ್ತಿರುವುದೇ ಈ ಪರಿಸ್ಥಿತಿ ಬಿಗಡಾಯಿಸಲು ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ. ನಗರದ ಕೇವಲ ಶೇ.15ರಷ್ಟು ಭಾಗದಲ್ಲಿ ಮಾತ್ರ ಮಳೆನೀರು ಕೊಯ್ಲು ಹಾಗೂ ಅಂತರ್ಜಲ ಮರುಪೂರಣ ವ್ಯವಸ್ಥೆ ಇದೆ.

ಹೈದರಾಬಾದ್‌ ನಲ್ಲಿ ವಾರ್ಷಿಕವಾಗಿ 900 ಮಿ.ಮೀ.ದಿಂದ 1,000 ಮಿ.ಮೀ.ವರೆಗೆ ಮಳೆಯಾಗುತ್ತಿದ್ದರೂ, ಅಂತರ್ಜಲ ಇಂಗಲು ಅಗತ್ಯವಿರುವ ಮುಕ್ತ ಜಾಗ ಹಾಗೂ ಹಸಿರು ಹೊದಿಕೆ ಇಲ್ಲದ ಕಾರಣ ಮಳೆನೀರಿನ ಬಹುದೊಡ್ಡ ಭಾಗ ನೇರವಾಗಿ ಚರಂಡಿ ಪಾಲಾಗುತ್ತಿದೆ ಎಂದು ತೆಲಂಗಾಣ ಅಂತರ್ಜಲ ಇಲಾಖೆಯ ನಿರ್ದೇಶಕ ಕೆ. ಲಕ್ಷ್ಮಣ್ ಹೇಳಿರುವುದಾಗಿ ಖಿimes ಔಜಿ Iಟಿಜiಚಿ ವರದಿ ಉಲ್ಲೇಖಿಸಿದೆ.

ಅಂತರ್ಜಲ ಮರುಪೂರಣಕ್ಕೆ ಸೂಕ್ತ ಶ್ರಮ ವಹಿಸದ ಕಾರಣ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿದೆ. "ಮಳೆನೀರು ಕೊಯ್ಲು ಗುಂಡಿಗಳನ್ನು ಸರಿಯಾಗಿ ನಿರ್ವಹಿಸಿದರೆ ಅಂತರ್ಜಲ ಮಟ್ಟವನ್ನು 10 ಮೀಟರ್ ಆಳದೊಳಗೆ ಕಾಯ್ದುಕೊಳ್ಳಬಹುದು. ಆದರೆ ಮರುಪೂರಣ ವ್ಯವಸ್ಥೆ ಇಲ್ಲದ ಕಾರಣ ಈಗ ನೀರಿನ ಮಟ್ಟ 20 ಮೀಟರ್ ಹಾಗೂ ಅದಕ್ಕಿಂತಲೂ ಆಳಕ್ಕೆ ಕುಸಿಯುತ್ತಿದೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.

►ಬಂಡೆಗಳಿಂದ ಕೂಡಿದ ಭೂಪ್ರದೇಶ ಮತ್ತು ಕಳಪೆ ಮರುಪೂರಣ ವ್ಯವಸ್ಥೆ

ಇತರ ಹಲವು ಪ್ರಮುಖ ನಗರಗಳಿಗೆ ಹೋಲಿಸಿದರೆ ಹೈದರಾಬಾದ್ ವಿಭಿನ್ನವಾದ ಭೌಗೋಳಿಕ ಅನನುಕೂಲತೆಯನ್ನು ಎದುರಿಸುತ್ತಿದೆ ಎಂದು ತಜ್ಞರು ಹೇಳುತ್ತಾರೆ.

"ಮುಂಬೈ, ಬೆಂಗಳೂರು ಮತ್ತು ದಿಲ್ಲಿಯಂತಹ ನಗರಗಳಿಗೆ ಹೋಲಿಸಿದರೆ ಹೈದರಾಬಾದ್ ಹೆಚ್ಚಾಗಿ ಬಂಡೆಗಳಿಂದ ಕೂಡಿದ ಭೂಪ್ರದೇಶದಲ್ಲಿದೆ. ಇದು ನೈಸರ್ಗಿಕವಾಗಿ ಮಳೆನೀರು ಭೂಮಿಯೊಳಗೆ ಇಂಗುವುದನ್ನು ಕಷ್ಟಕರವಾಗಿಸುತ್ತದೆ. ಮೃದುವಾದ ಮಣ್ಣು ಇರುವ ಪ್ರದೇಶಗಳಲ್ಲಿ ಮಳೆಬಂದಾಗ ನೀರು ಸುಲಭವಾಗಿ ಭೂಮಿಯೊಳಗೆ ಇಂಗಿ ಅಂತರ್ಜಲ ಮಟ್ಟ ಹೆಚ್ಚಲು ಸಹಾಯ ಮಾಡುತ್ತದೆ. ಹೈದರಾಬಾದ್‌ ನಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸದಿರುವುದು ಈ ಸಮಸ್ಯೆಯನ್ನು ಮತ್ತಷ್ಟು ದೊಡ್ಡದಾಗಿಸಿದೆ" ಎಂದು ಎಓಖಿUಊ ಜಲಸಂಪನ್ಮೂಲ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಬಿ. ವೆಂಕಟೇಶ್ವರ ರಾವ್ ಹೇಳಿದ್ದಾರೆ.

ಅಧಿಕೃತ ದಾಖಲೆಗಳ ಪ್ರಕಾರ, ಹೈದರಾಬಾದ್ ಜಿಲ್ಲೆಯೊಂದರಲ್ಲೇ ಸುಮಾರು 2.5 ಲಕ್ಷ ಬೋರ್‌ ವೆಲ್‌ ಗಳಿವೆ. ಆದರೆ ಇದರ ನಿಜವಾದ ಸಂಖ್ಯೆ ಇದಕ್ಕಿಂತಲೂ ಹೆಚ್ಚಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇಡೀ ಗ್ರೇಟರ್ ಹೈದರಾಬಾದ್ ವ್ಯಾಪ್ತಿಯಲ್ಲಿ ಬೋರ್‌ ವೆಲ್‌ ಗಳ ಸಂಖ್ಯೆ ಸುಮಾರು 10 ಲಕ್ಷಕ್ಕೆ ಹತ್ತಿರದಲ್ಲಿದೆ ಎನ್ನಲಾಗಿದೆ. 2002ರ ಜಲ, ಭೂಮಿ ಮತ್ತು ಮರಗಳ ಕಾಯ್ದೆ (Wಂಐಖಿಂ) ನಿಯಮಗಳನ್ನು ಉಲ್ಲಂಘಿಸಿ, ನಿಗದಿಪಡಿಸಿದ 400 ಅಡಿ ಮಿತಿಗಿಂತಲೂ ಹೆಚ್ಚು ಆಳಕ್ಕೆ ನೂರಾರು ಬೋರ್‌ ವೆಲ್‌ ಗಳನ್ನು ಅಕ್ರಮವಾಗಿ ಕೊರೆಯಲಾಗಿದೆ.

►ಸುರಕ್ಷಿತ ವಲಯದಿಂದ ಹೊರಬಂದ ತೆಲಂಗಾಣದ ನಾಲ್ಕನೇ ಒಂದು ಭಾಗ

ಈ ಅಂತರ್ಜಲ ಸಮೀಕ್ಷೆಯು ಇಡೀ ತೆಲಂಗಾಣ ರಾಜ್ಯದಲ್ಲೂ ಹೆಚ್ಚುತ್ತಿರುವ ನೀರಿನ ಅಭಾವವನ್ನು ಎತ್ತಿ ತೋರಿಸಿದೆ. ರಾಜ್ಯದ ಒಟ್ಟು 620 ಅಂತರ್ಜಲ ಮೌಲ್ಯಮಾಪನ ವಲಯಗಳ ಪೈಕಿ ಕೇವಲ 473 ವಲಯಗಳು ಮಾತ್ರ ಈಗ ಸುರಕ್ಷಿತ ವರ್ಗದಲ್ಲಿ ಉಳಿದುಕೊಂಡಿವೆ. ಇನ್ನುಳಿದ ವಲಯಗಳು ಅರ್ಧ-ಅಪಾಯಕಾರಿ, ಅಪಾಯಕಾರಿ ಅಥವಾ ಅತಿಯಾದ ಬಳಕೆಯಾಗಿರುವ ವರ್ಗಗಳಿಗೆ ಜಾರಿವೆ.

ಇದರೊಂದಿಗೆ ಅಂತರ್ಜಲದ ಗುಣಮಟ್ಟವೂ ಕಳವಳಕಾರಿಯಾಗುತ್ತಿದೆ. ಬಾಚುಪಲ್ಲಿ, ಬಾಲಾನಗರ, ಮಲ್ಕಾಜ್‌ ಗಿರಿ, ಘಾಟ್‌ಕೇಸರ್ ಮತ್ತು ಮೇಡ್ಚಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರಿನಲ್ಲಿ ಫ್ಲೋರೈಡ್ ಅಂಶ ಪತ್ತೆಯಾಗಿದೆ.


►ಮಹಾರಾಷ್ಟ್ರದ ಮರಾಠವಾಡದಲ್ಲಿ 400ರ ಗಡಿ ದಾಟಿದ ಟ್ಯಾಂಕರ್ ನಿಯೋಜನೆ

ಇತ್ತ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲೂ ನೀರಿನ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಇಲ್ಲಿ ನಿಯೋಜಿಸಲಾದ ನೀರಿನ ಟ್ಯಾಂಕರ್‌ ಗಳ ಸಂಖ್ಯೆ ಈಗ 400ರ ಗಡಿಯನ್ನು ದಾಟಿದ್ದು, ಕೇವಲ ಒಂದು ತಿಂಗಳ ಹಿಂದೆ ದಾಖಲಾಗಿದ್ದ 156 ಟ್ಯಾಂಕರ್‌ ಗಳ ಸಂಖ್ಯೆಗೆ ಹೋಲಿಸಿದರೆ ಇದು ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ.

ಛತ್ರಪತಿ ಸಂಭಾಜಿನಗರ ಅತ್ಯಂತ ಹೆಚ್ಚು ಬಾಧಿತ ಜಿಲ್ಲೆಯಾಗಿದ್ದು, ಇಡೀ ಪ್ರದೇಶದ ಒಟ್ಟು ಟ್ಯಾಂಕರ್ ಕಾರ್ಯಾಚರಣೆಗಳಲ್ಲಿ ಸುಮಾರು ಮೂರನೇ ಎರಡರಷ್ಟು ಭಾಗ ಇಲ್ಲೇ ನಡೆಯುತ್ತಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಈ ಜಿಲ್ಲೆಯೊಂದರಲ್ಲೇ 259 ಟ್ಯಾಂಕರ್‌ ಗಳು ಕಾರ್ಯನಿರ್ವಹಿಸುತ್ತಿವೆ. ಇದರ ನಂತರ ಜಲ್ನಾ (85), ಧಾರಾಶಿವ್ (17), ನಾಂದೇಡ್ (14), ಪರ್ಭನಿ (11), ಬೀಡ್ (8), ಲಾತೂರ್ (3) ಮತ್ತು ಹಿಂಗೋಲಿ (2) ಜಿಲ್ಲೆಗಳಿವೆ.

"ಟ್ಯಾಂಕರ್‌ ಗಳಿಗೆ ನೀರು ತುಂಬಿಸಲು ಮತ್ತು ತೊಂದರೆಗೊಳಗಾದ ನಿವಾಸಿಗಳ ನೀರಿನ ಅಗತ್ಯಗಳನ್ನು ಪೂರೈಸಲು ಈ ಭಾಗದಲ್ಲಿ 1,150ಕ್ಕೂ ಹೆಚ್ಚು ಖಾಸಗಿ ಬಾವಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಮಸ್ಥರು ನೀರಿನ ಅಭಾವವಿದೆ ಎಂದು ತಿಳಿಸಿದ ತಕ್ಷಣವೇ ಟ್ಯಾಂಕರ್ ವ್ಯವಸ್ಥೆ ಮಾಡಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ" ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

►ಮಳೆ ಕೊರತೆಯಿಂದ ಮತ್ತಷ್ಟು ಬಿಗಡಾಯಿಸಿದ ಮರಾಠವಾಡದ ನೀರಿನ ಸಂಕಷ್ಟ

ಜೂನ್ 1ರಿಂದ ಮರಾಠವಾಡ ಪ್ರದೇಶದಲ್ಲಿ ಕೇವಲ 38 ಮಿ.ಮೀ. ಮಳೆಯಾಗಿದ್ದು, ಒಟ್ಟಾರೆ ಶೇ.23ರಷ್ಟು ಮಳೆ ಕೊರತೆ ಕಂಡುಬಂದಿದೆ. ಕೆಲವು ಜಿಲ್ಲೆಗಳಲ್ಲಿ ಈ ಕೊರತೆ ಇನ್ನೂ ಹೆಚ್ಚಾಗಿದ್ದು, ಛತ್ರಪತಿ ಸಂಭಾಜಿನಗರದಲ್ಲಿ ಶೇ.73, ಜಲ್ನಾದಲ್ಲಿ ಶೇ.62 ಮತ್ತು ಹಿಂಗೋಲಿಯಲ್ಲಿ ಶೇ.55ರಷ್ಟು ಮಳೆ ಕೊರತೆಯಾಗಿದೆ.

ಹಿಂದಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಈ ಪ್ರದೇಶದಾದ್ಯಂತ 127 ಹಳ್ಳಿಗಳು ಮತ್ತು ಜನವಸತಿ ಪ್ರದೇಶಗಳು ತೀವ್ರ ನೀರಿನ ಅಭಾವ ಎದುರಿಸುತ್ತಿದ್ದು, ಇವುಗಳಲ್ಲಿ ಛತ್ರಪತಿ ಸಂಭಾಜಿನಗರ ಜಿಲ್ಲೆಯೊಂದರಲ್ಲೇ 85 ಬಾಧಿತ ಪ್ರದೇಶಗಳಿವೆ.

"ಬೇಸಿಗೆ ಮುಂದುವರಿದಂತೆ ಕುಡಿಯುವ ನೀರಿನ ಮೂಲಗಳು ಬತ್ತಿ ಹೋಗುತ್ತಿದ್ದು, ಹಲವು ಭಾಗಗಳಲ್ಲಿ ಅಭಾವ ಸೃಷ್ಟಿಯಾಗುತ್ತಿದೆ. ನಿವಾಸಿಗಳಿಂದ ದೂರು ಬಂದ ತಕ್ಷಣವೇ ನೀರಿನ ಟ್ಯಾಂಕರ್‌ ಗಳನ್ನು ವ್ಯವಸ್ಥೆ ಮಾಡಲು ಸ್ಥಳೀಯ ಅಧಿಕಾರಿಗಳಿಗೆ ಮೊದಲೇ ಸೂಚನೆ ನೀಡಲಾಗಿದೆ" ಎಂದು ಛತ್ರಪತಿ ಸಂಭಾಜಿನಗರ ವಿಭಾಗೀಯ ಆಯುಕ್ತರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

►ಜಲಾಶಯಗಳ ಮಟ್ಟ ಕುಸಿತ ಮತ್ತು ತೀವ್ರ ಬಿಸಿಗಾಳಿಯ ಒತ್ತಡ

ಮರಾಠವಾಡದಾದ್ಯಂತ ಇರುವ ಬೃಹತ್, ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳ ಒಟ್ಟು ಬಳಕೆಯಾಗಬಹುದಾದ ನೀರಿನ ಸಂಗ್ರಹವು ಸುಮಾರು ಶೇ.41ಕ್ಕೆ ಕುಸಿದಿದೆ. ನೀರಿನ ಸಂಗ್ರಹದ ಮಟ್ಟ ಕಳೆದ ವರ್ಷಕ್ಕಿಂತ ಸ್ವಲ್ಪ ಉತ್ತಮವಾಗಿದ್ದರೂ, ಹಲವಾರು ಜಲಾಶಯಗಳು ಆತಂಕಕಾರಿ ಮಟ್ಟವನ್ನು ತಲುಪಿವೆ.

ತೀವ್ರವಾದ ತಾಪಮಾನವು ಈ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಮರಾಠವಾಡದ ಕೆಲವು ಭಾಗಗಳಲ್ಲಿ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ನೀರಿನ ಆವಿಯಾಗುವಿಕೆಯನ್ನು ವೇಗಗೊಳಿಸಿದ್ದು, ಲಭ್ಯವಿರುವ ಜಲಸಂಪನ್ಮೂಲಗಳ ಮೇಲೆ ಒತ್ತಡವನ್ನು ಹೆಚ್ಚಿಸಿದೆ.

►ಅಂತರ್ಜಲ ಕುಸಿತ ಮತ್ತು ಯುರೇನಿಯಂ ಮಾಲಿನ್ಯದ ಭೀತಿಯಲ್ಲಿ ಪಂಜಾಬ್

ಪಂಜಾಬ್ ವಿಭಿನ್ನವಾದ ಆದರೆ ಅಷ್ಟೇ ಗಂಭೀರವಾದ ನೀರಿನ ಸವಾಲನ್ನು ಎದುರಿಸುತ್ತಿದೆ. ಇಲ್ಲಿ ಅತಿಯಾದ ಅಂತರ್ಜಲ ಬಳಕೆಯ ಜೊತೆಗೆ ನೀರು ಕಲುಷಿತಗೊಳ್ಳುತ್ತಿರುವುದು ದೊಡ್ಡ ಆತಂಕ ಮೂಡಿಸಿದೆ.

ರಾಜ್ಯಸಭಾ ಸದಸ್ಯ ಸತ್ನಾಮ್ ಸಿಂಗ್ ಸಂಧು ಅವರು ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ರಾಜ್ಯವು 'ನೀರಿನ ತುರ್ತು ಪರಿಸ್ಥಿತಿ'ಯನ್ನು ಎದುರಿಸುತ್ತಿದೆ ಎಂದು ಎಚ್ಚರಿಸಿದ್ದಾರೆ. ಅವರ ಪ್ರಕಾರ, ಪಂಜಾಬ್‌ನ 23 ಜಿಲ್ಲೆಗಳ ಪೈಕಿ 19 ಜಿಲ್ಲೆಗಳನ್ನು 'ಡಾರ್ಕ್ ಝೋನ್' ಎಂದು ವರ್ಗೀಕರಿಸಲಾಗಿದೆ.

►ದೇಶದಲ್ಲೇ ಅತಿ ಹೆಚ್ಚು ಅಂತರ್ಜಲ ಬಳಸುವ ರಾಜ್ಯ ಪಂಜಾಬ್

ಸತ್ನಾಮ್ ಸಿಂಗ್ ಸಂಧು ಅವರ ಪ್ರಕಾರ, ಪಂಜಾಬ್‌ನ ಅಂತರ್ಜಲ ಬಳಕೆಯ ದರವು ಶೇ.156.36ಕ್ಕೆ ತಲುಪಿದೆ. ಇದು ಇಡೀ ಭಾರತದಲ್ಲೇ ಅತ್ಯಂತ ಹೆಚ್ಚಾಗಿದ್ದು, ದೇಶದ ಸರಾಸರಿ ಬಳಕೆಯ ದರವಾದ ಶೇ.60ಕ್ಕಿಂತ ಬಹಳ ಮೇಲಿದೆ. ಹೆಚ್ಚು ನೀರು ಬೇಡುವ ಭತ್ತದ ಕೃಷಿಯೇ ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ.

"ಪಂಜಾಬ್ ನೀರಿನ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭತ್ತದ ಬೇಸಾಯದಿಂದಾಗಿ 19 ಜಿಲ್ಲೆಗಳು ಡಾರ್ಕ್ ಝೋನ್‌ನಲ್ಲಿವೆ ಮತ್ತು ಶೇ.62ಕ್ಕಿಂತ ಹೆಚ್ಚು ಅಂತರ್ಜಲ ಮಾದರಿಗಳಲ್ಲಿ ದೇಶದ ಬೇರೆಲ್ಲೆಡೆಗಿಂತಲೂ ಹೆಚ್ಚಿನ ಪ್ರಮಾಣದ ಯುರೇನಿಯಂ ಪತ್ತೆಯಾಗಿದೆ. ನೀರಿನಲ್ಲಿ ಯುರೇನಿಯಂ ಅಂಶ ಹೆಚ್ಚಿರುವುದು ಕ್ಯಾನ್ಸರ್ ಅಪಾಯವನ್ನು ಉಂಟುಮಾಡಬಹುದು" ಎಂದು ಅವರು ಹೇಳಿದ್ದಾರೆ.

►ಅಂತರ್ಜಲ ಸಂರಕ್ಷಣೆಗೆ ಕೇಂದ್ರ ಸರ್ಕಾರದಿಂದ ಅನುದಾನ

ಈ ಕಳವಳಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಜಲಶಕ್ತಿ ಸಚಿವ ಸಿ ಆರ್‌ ಪಾಟೀಲ್, 'ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್' ಅಡಿಯಲ್ಲಿ ಅಂತರ್ಜಲ ಸಂರಕ್ಷಣೆ ಮತ್ತು ಡಾರ್ಕ್ ಝೋನ್‌ಗಳ ಮರುಪೂರಣಕ್ಕಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ 32,000 ಕೋಟಿ ರೂ.ಕಾಯ್ದಿರಿಸಿದೆ ಎಂದು ತಿಳಿಸಿದ್ದಾರೆ. ನೀರಿನ ತೀವ್ರ ಅಭಾವವಿರುವ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ಮತ್ತು ಧನಸಹಾಯ ನೀಡಲಾಗುತ್ತಿದೆ ಎಂದರು.

ಜಲ ಸಂರಕ್ಷಣಾ ಕಾರ್ಯಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿಹೇಳಿದ ಅವರು, ದೇಶಾದ್ಯಂತ ಈಗಾಗಲೇ ಸುಮಾರು 44 ಲಕ್ಷ ಜಲ ಸಂರಕ್ಷಣಾ ನಿರ್ಮಾಣಗಳನ್ನು ಮಾಡಲಾಗಿದೆ ಎಂದು ಹೇಳಿದರು. ಜೊತೆಗೆ, 'ಕರ್ಮಭೂಮಿ ಸೇ ಮಾತೃಭೂಮಿ' ಉಪಕ್ರಮದ ಮೂಲಕ ಅನಿವಾಸಿ ಭಾರತೀಯರು ಮತ್ತು ವಲಸಿಗರು ತಮ್ಮ ಹಳ್ಳಿಗಳಲ್ಲಿ ಜಲ ಸಂರಕ್ಷಣಾ ಯೋಜನೆಗಳಿಗೆ ಬೆಂಬಲ ನೀಡುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು. ಇದರ ಅಡಿಯಲ್ಲಿ ದೇಶಾದ್ಯಂತ ಒಂದು ಕೋಟಿ ಜಲ ಸಂರಕ್ಷಣಾ ನಿರ್ಮಾಣಗಳನ್ನು ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

►ಭಾರತದಾದ್ಯಂತ ಹೆಚ್ಚುತ್ತಿರುವ ಆತಂಕದ ಮುನ್ಸೂಚನೆಗಳು

ಹೈದರಾಬಾದ್, ಕರ್ನಾಟಕ, ಮರಾಠವಾಡ ಮತ್ತು ಪಂಜಾಬ್‌ನಲ್ಲಿ ಉದ್ಭವಿಸಿರುವ ಪರಿಸ್ಥಿತಿಗಳು ಭಾರತದ ಅಂತರ್ಜಲ ಸಂಪನ್ಮೂಲಗಳ ಮೇಲಿರುವ ತೀವ್ರ ಒತ್ತಡವನ್ನು ಸ್ಪಷ್ಟಪಡಿಸುತ್ತವೆ. ಅತಿಯಾದ ಅಂತರ್ಜಲ ಬಳಕೆ ಮತ್ತು ವೇಗದ ನಗರೀಕರಣದಿಂದ ಹಿಡಿದು ಬರಗಾಲದ ಪರಿಸ್ಥಿತಿ, ಜಲ ಮಾಲಿನ್ಯ ಮತ್ತು ಹವಾಮಾನ ವೈಪರೀತ್ಯದವರೆಗೆ ಸವಾಲುಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿವೆ.

ಮುಂಬರುವ ವರ್ಷಗಳಲ್ಲಿ ಈ ಬಿಕ್ಕಟ್ಟು ಮತ್ತಷ್ಟು ಭೀಕರ ರೂಪ ಪಡೆಯುವುದನ್ನು ತಡೆಯಬೇಕಾದರೆ, ಬಲವಾದ ಅಂತರ್ಜಲ ಮರುಪೂರಣ ಕ್ರಮಗಳು, ಸುಸ್ಥಿರ ಜಲ ನಿರ್ವಹಣೆ ಮತ್ತು ವ್ಯಾಪಕ ಮಟ್ಟದ ಜಲ ಸಂರಕ್ಷಣಾ ಪ್ರಯತ್ನಗಳು ಅತ್ಯಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries