ನವದೆಹಲಿ: ಇಸ್ರೇಲ್–ಲೆಬನಾನ್ ಸಂಘರ್ಷದ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ತಾಳಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದ್ದು, ಅಸಲಿ ಮಾತೃಭೂಮಿಗಿಂತ ಕಲ್ಪಿತ ಪಿತೃಭೂಮಿ ಮುಖ್ಯವೇ ಎಂದು ಪ್ರಶ್ನೆ ಮಾಡಿದೆ.
ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಹಾಗೂ ಅದರಿಂದ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ಭಾರತ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸದಿರುವುದು ಆತಂಕಕಾರಿ ಎಂದು ಹೇಳಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಅಮೆರಿಕಾ ಮತ್ತು ಇರಾನ್ ನಡುವೆ ನಡೆಯುತ್ತಿರುವ ಮಾತುಕತೆಗಳ ಮಹತ್ವವನ್ನು ವಿವರಿಸಿದ್ದಾರೆ.
ಮಧ್ಯಪ್ರಾಚ್ಯದ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಈ ಮಾತುಕತೆಗಳು ಪ್ರಮುಖವಾಗಿದ್ದು, ಒಪ್ಪಂದ ಸಾಧ್ಯವಾದರೆ ಹಾರ್ಮುಜ್ ಜಲಸಂಧಿ ಮರುತೆರೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಜಾಗತಿಕ ತೈಲ ಸಾಗಣೆಯಲ್ಲಿ ಪ್ರಮುಖ ಪಾತ್ರವಹಿಸುವ ಈ ಜಲಸಂಧಿ ತೆರೆದರೆ ತೈಲ ಬೆಲೆ ಇಳಿಕೆಯಾಗಬಹುದು ಹಾಗೂ ಭಾರತದಂತಹ ತೈಲ ಆಮದು ರಾಷ್ಟ್ರಗಳಿಗೆ ಆರ್ಥಿಕ ಲಾಭವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಲೆಬನಾನ್‌ನಲ್ಲಿ ಇಸ್ರೇಲ್ ಮುಂದುವರಿಸುತ್ತಿರುವ ಸೇನಾ ಕಾರ್ಯಾಚರಣೆಗಳು ಹಾಗೂ ಭಾರೀ ದಾಳಿಗಳು, ಶಾಂತಿ ಮಾತುಕತೆಗಳ ಪ್ರಗತಿಗೆ ಅಡ್ಡಿಯಾಗುತ್ತಿವೆ. ಇಸ್ರೇಲ್‌ನ ಕ್ರಮಗಳಿಂದ ಶಾಂತಿ ಸ್ಥಾಪನೆಗೆ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ಇತ್ತೀಚಿನ ದೂರವಾಣಿ ಮಾತುಕತೆಯಲ್ಲೂ ಉದ್ವಿಗ್ನತೆ ಉಂಟಾಗಿತ್ತು ಎನ್ನುವ ಅಂತರರಾಷ್ಟ್ರೀಯ ವರದಿಗಳನ್ನು ಕಾಂಗ್ರೆಸ್ ಉಲ್ಲೇಖಿಸಿದೆ.
ಬೈರೂತ್ ಮೇಲೆ ಯೋಜಿತ ದಾಳಿ ನಡೆಸದಂತೆ ಟ್ರಂಪ್, ನೆತನ್ಯಾಹು ಅವರಿಗೆ ಸೂಚನೆ ನೀಡಿದ್ದರೆಂಬ ವರದಿಗಳನ್ನೂ ಜೈರಾಮ್ ರಮೇಶ್ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಈ ಬೆಳವಣಿಗೆಗಳ ನಡುವೆಯೂ ಭಾರತ ಸರ್ಕಾರ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದಿರುವುದನ್ನು ಪ್ರಶ್ನಿಸಿರುವ ಅವರು,“ಇಸ್ರೇಲ್ ಕ್ರಮವನ್ನು ಖಂಡಿಸಿರುವ ರಾಷ್ಟ್ರಗಳಲ್ಲಿ ಭಾರತ ಇಲ್ಲ. ಪ್ರಧಾನಿ ಮೋದಿ ಸಂಪೂರ್ಣ ಮೌನವಾಗಿದ್ದಾರೆಂದು ಟೀಕಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ಪ್ರಧಾನಿಗೆ ‘ಸೋ-ಕಾಲ್ಡ್ ಫಾದರ್‌ಲ್ಯಾಂಡ್’ ಹೆಚ್ಚು ಮುಖ್ಯವೇ? ಅಥವಾ ನಿಜವಾದ ಮಾತೃಭೂಮಿ ಮುಖ್ಯವೇ?” ಎಂದು ಪ್ರಶ್ನಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ, ತೈಲ ಬೆಲೆಗಳ ಏರಿಳಿತ ಹಾಗೂ ಜಾಗತಿಕ ರಾಜತಾಂತ್ರಿಕ ಬೆಳವಣಿಗೆಗಳು ಭಾರತದ ಆರ್ಥಿಕತೆ ಮತ್ತು ವಿದೇಶಾಂಗ ನೀತಿಗೆ ನೇರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ತನ್ನು ನಿಲುವನ್ನು ಬಹಿರಂಗಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹಿಸಿದೆ.

