ಮುಂಬೈ : ನನ್ನ ನಾಯಕತ್ವದಲ್ಲಿ ಪಕ್ಷದ ಕಾರ್ಯಕರ್ತರಿಗೆ ನಂಬಿಕೆ ಇಲ್ಲದಿದ್ದರೆ ನಾನು ಹುದ್ದೆಯಿಂದ ಕೆಳಗಿಳಿಯಲು ಸಿದ್ಧ ಎಂದು ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿದ್ದಾರೆ. ಶಿವಸೇನಾ ಪಕ್ಷದೊಳಗೆ ಬಂಡಾಯ ತೀವ್ರಗೊಳ್ಳುತ್ತಿರುವ ಮಧ್ಯೆ ಉದ್ದವ್ ಠಾಕ್ರೆ ನೀಡಿರುವ ಈ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.
ಶಿವಸೇನಾ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಉದ್ದವ್ ಠಾಕ್ರೆ, ನಾನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ. ಕಾರ್ಯಕರ್ತರು ಬಯಸಿದರೆ ಯಾರನ್ನಾದರೂ ಪಕ್ಷದ ಮುಖ್ಯಸ್ಥರನ್ನಾಗಿ ಮಾಡಲು ಸಿದ್ಧನಿದ್ದೇನೆ. ಆದರೆ, ಸಿದ್ಧಾಂತಕ್ಕಾಗಿರುವ ಹೋರಾಟವನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದು ಠಾಕ್ರೆ ಸ್ಪಷ್ಟಪಡಿಸಿದರು.
ನಾನು ಹೋರಾಟವನ್ನು ಕೈ ಬಿಡುವುದಿಲ್ಲ. ನಿಮಗೆ ನಾನು ಈ ಹುದ್ದೆಗೆ ಯೋಗ್ಯನಲ್ಲ ಎಂದು ಅನಿಸಿದರೆ, ನಾನು ಸ್ವಯಂಪ್ರೇರಿತವಾಗಿ ಆ ಸ್ಥಾನವನ್ನು ತೊರೆಯುತ್ತೇನೆ ಎಂದು ಉದ್ದವ್ ಠಾಕ್ರೆ ಹೇಳಿದರು.
ನಾವು ಭರವಸೆ ಕಳೆದುಕೊಳ್ಳುತ್ತೇವೆ ಎಂದು ಕೆಲವರು ನಿರೀಕ್ಷಿಸಿದ್ದರು, ನಾವು ಭರವಸೆ ಕಳೆದುಕೊಳ್ಳುವುದಿಲ್ಲ. ಶಿವಸೇನೆ (ಯುಬಿಟಿ) ತನ್ನ ಹೋರಾಟವನ್ನು ಮುಂದುವರೆಸುತ್ತದೆ. ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರನ್ನು ಉಲ್ಲೇಖಿಸಿ, ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ಧ ಹೋರಾಡುವಂತೆ ಸೂಚಿಸಿದ್ದರು ಎಂದು ಹೇಳಿದರು.
"ಜನರು ನಮಗೆ ಮತ ಹಾಕಿದ್ದರು. ಆದರೆ ನಮ್ಮ ಸಂಸದರು ಪಕ್ಷವನ್ನು ತೊರೆದಿದ್ದಾರೆ. ಅದಕ್ಕಾಗಿ ನಾನು ಮತದಾರರ ಬಳಿ ಕ್ಷಮೆ ಕೇಳುತ್ತೇನೆ" ಎಂದು ಉದ್ದವ್ ಠಾಕ್ರೆ ಹೇಳಿದರು.

