ಹಾಪುರ್: ಸಾಮಾನ್ಯವಾಗಿ ಗೂಗಲ್ ಮ್ಯಾಪ್ ಬಳಸುವವರು ದಾರಿ ತಪ್ಪುವುದು ಹೊಸದೇನಲ್ಲ. ಸವಾರರು ಅದೆಷ್ಟೋ ಬಾರಿ ಮ್ಯಾಪ್ ಅನ್ನು ನಂಬಿ ಸುತ್ತಿ, ಸುತ್ತಿ ಸುಸ್ತಾಗಿರುವ ಉದಾಹರಣೆಗಳಿವೆ. ಗೂಗಲ್ ಮ್ಯಾಪ್ ಸರಿಯಾದ ದಾರಿ ತೋರಿಸುತ್ತೆ ಅಂತ ನಂಬಿ ಹೋದರೆ ಏನಾಗುತ್ತೆ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ.
ಮಧ್ಯರಾತ್ರಿಯಲ್ಲಿ ಗೂಗಲ್ ಮ್ಯಾಪ್ ನೋಡಿಕೊಂಡು ಹೋಗುತ್ತಿದ್ದ ಕುಟಂಬಸ್ಥರಿದ್ದ ಐಷಾರಾಮಿ ಕಾರೊಂದು ಆಳವಾದ ಚರಂಡಿಯಲ್ಲಿ ಸಿಲುಕಿಕೊಂಡಿದ್ದ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ಅಧಿಕಾರಿಗಳು ಸೋಮವಾರ (ಜೂನ್ 15) ರಕ್ಷಿಸಿದ್ದಾರೆ.
ಘಟನೆ ಸಂಭವಿಸಿದ್ದು ಹೇಗೆ?
ಗ್ರೇಟರ್ ನೋಯ್ಡಾದ ದಾದ್ರಿ ಪ್ರದೇಶದ ಸದ್ದಿಪುರ ನಿವಾಸಿ ಸಾಹಿಲ್ ಎಂಬುವವರು ಭಾನುವಾರ ತಮ್ಮ ಕುಟುಂಬದೊಂದಿಗೆ ನೆರೆಯ ಮೀರತ್ ಜಿಲ್ಲೆಯ ಕಿಥೋರ್‌ನಲ್ಲಿರುವ ಸಂಬಂಧಿಕರ ಮನೆಗೆ ಕಾರಿನಲ್ಲಿ ಹೊರಟಿದ್ದಾಗ ಪ್ರೀತ್ ವಿಹಾರ್ ಪ್ರದೇಶದ ಬಳಿ ಈ ಘಟನೆ ಸಂಭವಿಸಿದೆ.
ಮೂಲಗಳ ಪ್ರಕಾರ, ದೆಹಲಿ ಫಾಟಕ್ ಮೇಲ್ಸೇತುವೆ ಬಳಿಯ ರಸ್ತೆಯು ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿತ್ತು. ಹೀಗಾಗಿ ಬದಲಿ ಮಾರ್ಗಕ್ಕಾಗಿ ಸಾಹಿಲ್ ಅವರು ಗೂಗಲ್ ಮ್ಯಾಪ್‌ನ ಸಹಾಯ ಪಡೆದಿದ್ದಾರೆ. ಮ್ಯಾಪ್ ತೋರಿಸಿದ ಪರ್ಯಾಯ ರಸ್ತೆಯಲ್ಲಿ ಸಾಗಿದ್ದಾರೆ. ಆನಂದ್ ವಿಹಾರ್ ಯೋಜನೆ ಪ್ರದೇಶಕ್ಕೆ ತಲುಪಿದಾಗ ಅಲ್ಲಿ ರಸ್ತೆಯುದ್ದಕ್ಕೂ ನೀರು ನಿಂತಿತ್ತು. ಕತ್ತಲೆಯಾಗಿದ್ದರಿಂದ ಸಾಹಿಲ್ ಅವರು ಅದನ್ನು ಸಾಮಾನ್ಯ ಮಳೆನೀರು ಎಂದು ಭಾವಿಸಿ ಕಾರನ್ನು ಚಲಾಯಿಸಿಕೊಂಡು ಮುಂದೆ ಹೋಗಿದ್ದಾರೆ.
ಆದರೆ, ಅದು ರಸ್ತೆ ಪಕ್ಕದ ಆಳವಾದ ಚರಂಡಿಯಾಗಿದ್ದು, ನಿಯಂತ್ರಣ ತಪ್ಪಿದ ಕಾರು ನೇರವಾಗಿ ಚರಂಡಿಗೆ ಜಾರಿ ಬಿದ್ದಿದೆ. ಕಾರು ಚರಂಡಿ ನೀರಿಗೆ ಬೀಳುತ್ತಿದ್ದಂತೆ ಕಾರಿನ ಎಲೆಕ್ಟ್ರಾನಿಕ್ ವ್ಯವಸ್ಥೆ ಕೈಕೊಟ್ಟಿದೆ. ಇದರಿಂದಾಗಿ ಕಾರಿನ ಎಲ್ಲಾ ಬಾಗಿಲುಗಳು ಸ್ವಯಂಚಾಲಿತವಾಗಿ ಲಾಕ್ ಆಗಿ ಐದೂ ಜನ ಹೊರಬರಲಾರದೆ ಕಾರಿನೊಳಗೆ ಸಿಕ್ಕಿಹಾಕಿಕೊಂಡಿದ್ದರು.
ಕುಟಂಬಸ್ಥರನ್ನು ರಕ್ಷಿಸಿದ ಪೊಲೀಸರು
ಈ ನಡುವೆ 112 ಮೂಲಕ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಗ್ನಿಶಾಮಕ ದಳದ ನೆರವು ಕೋರಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಸತತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕೊನೆಗೆ ಕಾರಿನ ಕಿಟಕಿಗಳು ಮತ್ತು ಇತರ ಭಾಗಗಳನ್ನು ಒಡೆದು ಒಳಗಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ಮುಖ್ಯ ಅಗ್ನಿಶಾಮಕ ಅಧಿಕಾರಿ ಅಜಯ್ ಶರ್ಮಾ, 'ಕುಟುಂಬದವರು ಗೂಗಲ್ ಮ್ಯಾಪ್ ನೋಡಿ ಅಜಾಗರೂಕತೆಯಿಂದ ತಪ್ಪು ರಸ್ತೆಯಲ್ಲಿ ಬಂದಿದ್ದರು. ಕತ್ತಲೆಯಾಗಿದ್ದರಿಂದ ರಸ್ತೆಯಲ್ಲಿ ನೀರು ತುಂಬಿದ್ದು, ಅವರಿಗೆ ಚರಂಡಿ ಇರುವುದು ಗೊತ್ತಾಗಲಿಲ್ಲ' ಎಂದು ತಿಳಿಸಿದ್ದಾರೆ.
ತಮ್ಮನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕುಟುಂಬಸ್ಥರು ಕಣ್ಣೀರಿಡುತ್ತಾ ಧನ್ಯವಾದ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

