ಪುಣೆ: ಭಾರತ ಮತ್ತು ಪಾಕಿಸ್ತಾನದ ಜನರ ನಡುವೆ ಪರಸ್ಪರ ಸಂಪರ್ಕ ಏರ್ಪಡಬೇಕು ಎಂದು ಆರೆಸ್ಸೆಸ್ ನಾಯಕ ಸುನಿಲ್ ಅಂಬೇಕರ್ ಬುಧವಾರ ಪ್ರತಿಪಾದಿಸಿದ್ದಾರೆ. ಉಭಯ ದೇಶಗಳ ಸರಕಾರಗಳು, ಸೇನೆಗಳು ಮತ್ತು ಏಜೆನ್ಸಿಗಳ ನಡುವೆ ಇದುವರೆಗೆ ನಡೆದ ಮಾತುಕತೆಗಳು ವಿಫಲವಾಗಿವೆ ಎಂದು ಅವರು ಬೆಟ್ಟು ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ಅಂಬೇಕರ್, 'ಪಾಕಿಸ್ತಾನದೊಂದಿಗೆ ಮಾತುಕತೆ' ಕುರಿತು ಆರೆಸ್ಸೆಸ್‌ನ ಹಿರಿಯ ಪದಾಧಿಕಾರಿ ದತ್ತಾತ್ರೇಯ ಹೊಸಬಾಳೆ ಮತ್ತು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳು ಜನರ ನಡುವಿನ ಸಂಪರ್ಕದ ಬಗ್ಗೆಯಾಗಿದ್ದವೇ ಹೊರತು ಅಧಿಕೃತ ರಾಜತಾಂತ್ರಿಕ ಮಾತುಕತೆಯ ಕುರಿತಲ್ಲ ಎಂದು ಸ್ಪಷ್ಟಪಡಿಸಿದರು.
ಆರೆಸ್ಸೆಸ್ ಮುಖ್ಯಸ್ಥರು ನೀಡಿದ ಹೇಳಿಕೆಯು ಜನರ ನಡುವಿನ ಸಂಪರ್ಕಕ್ಕೆ ಸಂಬಂಧಿಸಿದ್ದಾಗಿದೆ. ಸರಕಾರಗಳು ಮಾತುಕತೆ ನಡೆಸಬೇಕೇ ಅಥವಾ ಬೇಡವೇ ಎನ್ನುವುದು ರಾಷ್ಟ್ರೀಯ ಹಿತಾಸಕ್ತಿ ಮತ್ತು ಹಲವಾರು ಸೂಕ್ಷ್ಮ ವಿಷಯಗಳನ್ನು ಒಳಗೊಂಡಿರುವ ಕಠಿಣ ರಾಜತಾಂತ್ರಿಕತೆಯ ವಿಷಯವಾಗಿದೆ ಎಂದು ಹೇಳಿದರು.
ವಿಶೇಷವಾಗಿ ಸಂಘರ್ಷ ಅಥವಾ ಅಸಾಮಾನ್ಯ ಪರಿಸ್ಥಿತಿಗಳ ಸಮಯದಲ್ಲಿ ವಿದೇಶಾಂಗ ನೀತಿಯ ನಿರ್ಧಾರಗಳನ್ನು ಸರ್ಕಾರಕ್ಕೆ ಬಿಡುವುದು ಉತ್ತಮ ಎಂದು ಹೇಳಿದ ಅಂಬೇಕರ್, ವಿದೇಶಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಿದಾಗ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು ಮತ್ತು ಅಭಿಪ್ರಾಯಗಳನ್ನು ಸರಕಾರಕ್ಕೆ ತಿಳಿಸಬೇಕು. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸರ್ಕಾರವೇ ಅಂತಿಮ ಸಾರ್ವಜನಿಕ ನಿಲುವನ್ನು ತೆಗೆದುಕೊಳ್ಳಬೇಕು ಎಂದರು. ಆರೆಸ್ಸೆಸ್ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಅಗತ್ಯವಿದ್ದಾಗಲೆಲ್ಲ ತನ್ನ ಅಭಿಪ್ರಾಯಗಳನ್ನು ಸರಕಾರಕ್ಕೆ ತಿಳಿಸುತ್ತದೆ ಎಂದು ಅಂಬೇಕರ್ ಹೇಳಿದರು.
ಭಾಗವತ್ ಅವರ ಹೇಳಿಕೆಯನ್ನು ಮತ್ತಷ್ಟು ವಿವರಿಸಿದ ಅವರು, ಸರಕಾರಗಳು,ಸೇನೆಗಳು ಮತ್ತು ಏಜೆನ್ಸಿಗಳ ನಡುವೆ ಮಾತುಕತೆಗಳ ಸಾಂಪ್ರದಾಯಿಕ ವಿಧಾನಗಳು ಇದುವರೆಗೆ ನಿರೀಕ್ಷಿತ ಫಲಿತಾಂಶಗಳನ್ನು ನೀಡಿಲ್ಲ . ನಾವು ಭರವಸೆಯನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಜನರ ನಡುವಿನ ಸಂಪರ್ಕವು ಮುಖ್ಯವಾಗಿದೆ ಎಂದು ಹೇಳಿದರು.

