ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯಿಂದ ಪ್ರಕರಣದ ಕಡತವೊಂದು ಕಾಣೆಯಾಗಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು, ತಾನು ಈ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಬುಧವಾರ ಸಿಜೆಐ ಸೂರ್ಯಕಾಂತ್ ಮತ್ತು ನ್ಯಾ.ವಿ. ಮೋಹನಾ ಅವರ ಪೀಠದ ಮುಂದೆ ವಕೀಲರೊಬ್ಬರು ಈ ವಿಷಯವನ್ನು ಪ್ರಸ್ತಾಪಿಸಿದಾಗ ಈ ಗಂಭೀರ ಲೋಪ ಬೆಳಕಿಗೆ ಬಂದಿದೆ.
ಈ ತಿಂಗಳ ಆರಂಭದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದ್ದರೂ ಅದನ್ನು ಇನ್ನೂ ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ ಎಂದು ತಿಳಿಸಿದ ವಕೀಲರು, ಈ ಕುರಿತು ರಿಜಿಸ್ಟ್ರಾರ್‌ಗೆ ಪತ್ರ ಬರೆಯಲಾಗಿತ್ತು,ಆದರೆ ರಿಜಿಸ್ಟ್ರಿಯಿಂದ ಕಡತವು ಕಾಣೆಯಾಗಿರುವಂತೆ ತೋರುತ್ತಿರುವುದರಿಂದ ಪ್ರಕರಣವನ್ನು ನ್ಯಾಯಾಲಯದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ ಎಂದು ಹೇಳಿದರು.
ಇದು ತುರ್ತು ವಿಷಯವಾಗಿದೆ ಎಂದು ಹೇಳಿದ ಅವರು, ಅರ್ಜಿಯನ್ನು ಶೀಘ್ರದಲ್ಲೇ ವಿಚಾರಣೆಗೆ ಪಟ್ಟಿ ಮಾಡುವಂತೆ ಪೀಠವನ್ನು ಆಗ್ರಹಿಸಿದರು.
'ರಿಜಿಸ್ಟ್ರಿಯಲ್ಲಿ ಕಡತವು ಕಾಣೆಯಾಗಿರುವುದು ಗಂಭೀರವಾದ ವಿಷಯವಾಗಿದೆ. ನಮ್ಮ ರಿಜಿಸ್ಟ್ರಿಯಲ್ಲಿ ತುರ್ತು ವಿಷಯಗಳ ಕಡತಗಳು ಕಾಣೆಯಾಗುತ್ತಿದ್ದರೆ ನಾನು ಅದನ್ನು ವಿಚಾರಣೆಗೆ ಪಟ್ಟಿ ಮಾಡಲು ಮಾತ್ರ ನಿರ್ದೇಶನ ನೀಡುತ್ತೇನೆ ಎಂದು ನೀವು ಭಾವಿಸುತ್ತೀರಾ? ನಾನು ಅದಕ್ಕಿಂತ ಹೆಚ್ಚಿನದನ್ನು ಮಾಡಬೇಕಾಗಿದೆ'ಎಂದು ಸಿಜೆಐ ಹೇಳಿದರು.
ಸಂಪೂರ್ಣ ವಿವರಗಳನ್ನು ನೀಡುವಂತೆ ವಕೀಲರಿಗೆ ಸೂಚಿಸಿದ ಅವರು,'ನಾನು ಈ ಲೋಪವನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಮತ್ತು ಇದರ ಹಿಂದಿನ ಕಾರಣವನ್ನು ಕಂಡುಕೊಳ್ಳಲು ಬಯಸಿದ್ದೇನೆ'ಎಂದು ಹೇಳಿದರು.

