ಮಂಜೇಶ್ವರ: ಮಂಜೇಶ್ವರ ರೈಲ್ವೆ ನಿಲ್ದಾಣ ವಠಾರದಲ್ಲಿ ಕಳೆದ ಒಂದು ದಶಕದಿಂದ ಹಲವಾರು ಜೀವಗಳು ರೈಲಿಗೆ ಬಲಿಯಾಗಿದೆ. ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಧೋರಣೆಯಿಂದ ಒಂಷ್ಟು ಜೀವಗಳು ಬಲಿಯಾಗುತ್ತಿದ್ದರೆ, ಇನ್ನು ಜನರ ಬೇಕಾಬಿಟ್ಟಿ ಸಂಚಾರದಿಂದಲೂ ಜೀವ ಕಲೆದುಕೊಳ್ಳಬೇಕಾಗುತ್ತಿದೆ.
ಬಹುತೇಕ ಸಂದರ್ಭ ರೈಲು ನಿಲ್ದಾಣಗಳಲ್ಲಿ ಒಂದುಫ್ಲ್ಯಾಟ್‍ಫಾರ್ಮಿನಿಂದ ಇನ್ನೊಂದಕ್ಕೆ ಸುಲಭವಾಗಿ ಸಂಚರಿಸಲು ಅಪಾಯಕಾರಿಯಾಗಿ ಹಳಿ ಅಡ್ಡದಾಟಿ ಸಂಚರಿಸುವ ಮೂಲಕ ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಪ್ರಯಾಣಿಕರು ರೈಲು ಏರಲು ಹಾಗೂ ರೈಲಿನಿಂದ ಇಳಿದು ಸಾಗಲು ಮೇಲ್ಸೇತುವೆ ಬಳಸದೆ, ಹಳಿ ಅಡ್ಡದಾಟುವ ಮೂಲಕ ಸುಲಭದ ಹಾದಿ ಹಿಡಿಯುತ್ತಿದ್ದರೂ, ಕರ್ತವ್ಯದಲ್ಲಿರುವ ಪೊಲೀಸರು ಮೌನ ಪಾಲಿಸುತ್ತಿರುವುದಾಗಿ ವ್ಯಾಪಕ ದೂರು ಕೇಳಿಬರುತ್ತಿದೆ. ರೈಲು ಹೊರಡುವ ಸಮಯಕ್ಕೆ ಆಗಮಿಸುವ ಪ್ರಯಾಣಿಕರು, ಇನ್ನೊಂದು ಫ್ಲ್ಯಾಟ್‍ಫಾರ್ಮಿಗೆ ತೆರಳಲು ಸುಲಭವಾಗಿ ತೆರಳಲು ಈ ರೀತಿ ಅಡ್ಡದಾರಿ ಹಡಿಯುತ್ತಾರೆ. ಇನ್ನು ರೈಲು ಇಳಿದು ಸಂಚರಿಸಲೂ ಇದೇ ರೀತಿ ಹಳಿ ಅಡ್ಡದಾಟುತ್ತಿದ್ದಾರೆ. ಕುಂಬಳೆ ರೈಲ್ವೆ ನಿಲ್ದಾಣದಲ್ಲಿ ವರ್ಷಗಳ ಹಿಂದೆ ಇದೇ ರೀತಿ ಹಳಿ ಅಡ್ಡದಾಟುವ ಮಧ್ಯೆ ರೈಲು ಡಿಕ್ಕಿಯಾಗಿ ಮಹಿಳೆ ಮೃತಪಟ್ಟ ಘಟನೆ ನಡೆದಿತ್ತು.
ಮಂಜೇಶ್ವರದಲ್ಲಿ ಮರುಕಳಿಸುತ್ತಿರುವ ದುರಂತ:
ಮಂಜೇಶ್ವರ ರೈಲ್ವೆ ನಿಲ್ದಾಣ ವಠಾರದಲ್ಲಿ ರೈಲು ಡಿಕ್ಕಿಯಾಗಿ ಸಾವು ಸಂಭವಿಸುತ್ತಿರುವ ಘಟನೆ ಮರುಕಳಿಸುತ್ತಿರುವುದು ಆತಂಕಕಾರಿಯಾಗಿದೆ. 2018ರಲ್ಲಿ ಇದೇ ಪ್ರದೇಶದಲ್ಲಿ ಒಂದು ಮಗು ಸೇರಿದಂತೆ ಮೂವರು ರೈಲುಡಿಕ್ಕಿಯಾಗಿ ಸಾವಿಗೀಡಾಗಿದ್ದರು. ಅನತಿ ದೂರದಲ್ಲಿ ಕಾಲ್ನಡೆ ಮೇಲ್ಸೇತುವೆಯಿದ್ದರೂ, ಅನಧಿಕೃತ ಹಾದಿಮೂಲಕ ಹಳಿ ಅಡ್ಡದಾಟಿರುವುದು ದುರಂತಕಕೆ ಕಾರಣವಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ಬಸ್ ನಿಲ್ದಾಣದಿಂದ ಬಸ್ಸಿಳಿದು ಒಳ ಪ್ರದೇಶ ಮಂಜೇಶ್ವರಕ್ಕೆ ಸಾಗುವಲ್ಲಿ ರೈಲ್ವೆಹಳಿ ಸಮೀಪ ಗೇಟ್ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಹಳೇ ಮಂಜೇಶ್ವರವೆಂದೇ ಕರೆಯಲ್ಪಡುವ ಅತಿ ಜನದಟ್ಟಣೆಯ ಒಳ ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಸಾಗಲು ರೈಲು ಹಳಿಯನ್ನು ದಾಟಿಯೇ ಸಾಗಬೇಕು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಕಚೇರಿ ಸಹಿತ ಹಲವು ಬ್ಲಾಕ್ ಮಟ್ಟದ ಕಾರ್ಯಾಲಯಗಳು, ಶಾಲೆ, ಗೋವಿಂದ ಪೈ ಸ್ಮಾರಕ ಗ್ರಂಥಾಲಯ ಮುಂತಾದ ಪ್ರದೇಶಗಳಿಗೆ ಸುಲಭವಾಗಿ ತಲುಪಲು ಇಲ್ಲಿಯ ಕಾಲ್ನಡಿಗೆ ಹಾದಿಯನ್ನೇ ಜನ ಹೆಚ್ಚಾಗಿ ಬಳಸುತ್ತಾರೆ. ರೈಲ್ವೆ ಹಳಿಯಲ್ಲಿ ಕೆಲವೊಮ್ಮೆ ಮೂರ್ನಾಲ್ಕು ದಿನ ಸರಕು ಸಾಗಾಟದ ರೈಲುಗಳು ಠಿಕಾಣಿ ಹೂಡುತ್ತಿದ್ದು, ಈ ಸಂದರ್ಭ ಜನ ರೈಲಿನಡಿಯಿಂದ ಅಪಾಯಕಾರಿಯಾಗಿ ತೆವಳಿಕೊಂಡು ಸಂಚರಿಸುತ್ತಿದ್ದಾರೆ.
ರೈಲ್ವೆ ಇಲಾಖೆ ದಾಖಲೆ ಪ್ರಕಾರ ಈ ಹಾದಿಯನ್ನು ಜನರು ಅನಧಿಕೃತವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಲಾಖೆ ವತಿಯಿಂದ ನಿರ್ಮಿಸಿದ ಕಾಲ್ನಡೆ ಮೇಲ್ಸೇತುವೆ ನಿಲ್ದಾಣದಲ್ಲಿ ಇರುವಾಗ ಬೇರೊಂದು ಹಾದಿ ಬಳಸಿ, ಅಪಾಯ ಉಂಟಾದಲ್ಲಿ ರೈಲ್ವೆ ಇಲಾಖೆ ಇದಕ್ಕೆ ಹೊಣೆಯಾಗಿರುವುದಿಲ್ಲ. ಸ್ವಂತ ಜವಾಬ್ದಾರಿಯಿಂದ ಮಾತ್ರ ಹಳಿ ದಾಟಲು ಈ ದಾರಿ ಬಳಸಬಹುದಷ್ಟೇ ಎಂಬುದು ಅಧಿಕಾರಿಗಳುಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಅಭಿಮತ:
ರೈಲ್ವೆ ನಿಲ್ದಾಣಗಳಲ್ಲಿ ಕಾನೂನು ಉಲ್ಲಂಘಿಸಿ ಹಳಿ ದಾಟುವವರ ಬಗ್ಗೆ ಕಟ್ಟು ನಿಟ್ಟಿನ ನಿಯಂತ್ರಣ ತರಬೇಕಾಗಿದೆ. ನಿಲ್ದಾಣಗಳಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ. ಕಾನೂನು ಉಲ್ಲಂಘಿಸಿ ಹಳಿ ಅಡ್ಡ ದಾಟುವವರಿಂದ ಗರಿಷ್ಠ ಪ್ರಮಾಣದಲ್ಲಿ ದಂಡ ವಸೂಲಿ ಸೇರಿದಂತೆ ಇತರ ಶಿಕ್ಷಗೆ ಗುರಿಪಡಿಸಿದಾಗ ಕ್ರಮೇಣ ಈ ರೀತಿ ಹಳಿ ದಾಟುವವರ ಸಂಖ್ಯೆ ಕಡಿಮೆಯಾಗಲು ಸಾಧ್ಯ. ಇಂತಹ ದುಸ್ಸಾಹಸ ಕೈಗೊಳ್ಳುವ ಪ್ರಯಾಣಿಕರೂ ಜಾಗೃತರಾಗಬೇಕಾಗಿದೆ.
ಆರ್. ಪ್ರಶಾಂತ್, ಅಧ್ಯಕ್ಷ
ಕಾಸರಗೋಡು ರೈಲ್ವೆ ಪ್ರಯಾಣಿಕರ ಸಂಘ



