ನವದೆಹಲಿ: 'ಭಾರತವು ಜಿ7 ಶೃಂಗಸಭೆಯಲ್ಲಿ ತನ್ನ ಅಗತ್ಯಗಳ ಬಗೆಗೆ ಮಾತಾಡುವುದಷ್ಟೇ ಅಲ್ಲ, ಬದಲಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆಶೋತ್ತರಗಳ ಧ್ವನಿಯಾಗಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಫ್ರಾನ್ಸ್ ಮತ್ತು ಸ್ಲೊವಾಕಿಯ ಪ್ರವಾಸಕ್ಕೆ ತೆರಳುವ ಮುನ್ನ ಅವರು ಮಾತನಾಡಿದರು.
ಈ ಪ್ರವಾಸದ ವೇಳೆ, ಜೂನ್ 17 ಮತ್ತು 18ರಂದು ಫ್ರಾನ್ಸ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ.
'ಭಾರತವು ಸತತ ಎಂಟನೇ ಬಾರಿ ಶೃಂಗಸಭೆಗೆ ಆಹ್ವಾನ ಪಡೆದಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ಭಾರತದ ವರ್ಚಸ್ಸು ಮತ್ತು ಪಾಲುದಾರ ದೇಶಗಳು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಇದು ಪ್ರತಿನಿಧಿಸುತ್ತದೆ' ಎಂದು ಅವರು ಅಭಿಪ್ರಾಯಪಟ್ಟರು.
'ಯುರೋಪ್ ಮತ್ತು ಜಿ7 ರಾಷ್ಟ್ರಗಳ ಜೊತೆಗಿನ ಭಾರತದ ಆಳವಾದ ಬಾಂಧವ್ಯವನ್ನು ಈ ಭೇಟಿಯು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ಪಾಲುದಾರಿಕೆಯನ್ನು ಖಂಡ ಹಾಗೂ ಅದರಾಚೆಗೂ ವಿಸ್ತರಿಸುವ ನಮ್ಮ ದೃಢವಾದ ಬದ್ಧತೆಯನ್ನು ಎತ್ತಿತೋರಿಸುತ್ತದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
1993ರಲ್ಲಿ ಸ್ಲೊವಾಕಿಯ ಸ್ವಾತಂತ್ರ್ಯ ಪಡೆದ ಬಳಿಕ ಭಾರತದ ಪ್ರಧಾನಿಯೊಬ್ಬರು ಆ ದೇಶಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, 'ಇದೊಂದು ಐತಿಹಾಸಿಕ ಮೈಲಿಗಲ್ಲು ಮತ್ತು ದ್ವಿಪಕ್ಷೀಯ ಬಾಂಧವ್ಯಕ್ಕೆ ವೇಗ ತುಂಬುತ್ತದೆ' ಎಂದು ಪ್ರಧಾನಿ ಬಣ್ಣಿಸಿದರು.

