ನವದೆಹಲಿ: ಟೆನಿಸ್ ದಂತಕಥೆ ವಿಜಯ್ ಅಮೃತ್ರಾಜ್, ಮಲಯಾಳ ನಟ ಮಮ್ಮುಟ್ಟಿ, ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್ ಸೇರಿದಂತೆ 65 ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.
ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ನಡೆದ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೇರಳದ ಕೆ.ಟಿ ಥಾಮಸ್ (ಸಾರ್ವಜನಿಕ ವ್ಯವಹಾರ), ಹಿರಿಯ ಪತ್ರಕರ್ತ ಕೇರಳದ ಪಿ.ನಾರಾಯಣನ್ (ಸಾಹಿತ್ಯ ಮತ್ತು ಶಿಕ್ಷಣ) ಅವರಿಗೆ 'ಪದ್ಮವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಮಾರಂಭದಲ್ಲಿ ಮಮ್ಮುಟ್ಟಿ, ಅಲ್ಕಾ ಯಾಜ್ಞಿಕ್, ಅಮೆರಿಕದ ಪ್ರಖ್ಯಾತ ಕ್ಯಾನ್ಸರ್ ತಜ್ಞ (ಆಂಕೊಲಾಜಿಸ್ಟ್) ದತ್ತಾತ್ರೇಯಡು ನೋರಿ, ಟೆನಿಸ್ ಆಟಗಾರ ವಿಜಯ್ ಅಮೃತ್ರಾಜ್, ಉದ್ಯಮಿ ಎಸ್.ಕೆ.ಎಂ. ಮೈಲಾನಂದನ್ ಮತ್ತು ಸಾಮಾಜಿಕ ಕಾರ್ಯಕರ್ತ ಹಾಗೂ ಶಿಕ್ಷಣ ತಜ್ಞ ವೆಲ್ಲಪಳ್ಳಿ ನಟೇಶನ್ ಅವರು ಮುರ್ಮು ಅವರಿಂದ 'ಪದ್ಮಭೂಷಣ' ಪ್ರಶಸ್ತಿ ಸ್ವೀಕರಿಸಿದ್ದಾರೆ.
ಜೆಎಂಎಂ ಸ್ಥಾಪಕ ಮತ್ತು ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ಪರವಾಗಿ ಅವರ ಪತ್ನಿ ರೂಪಿ ಸೊರೇನ್ ಅವರು ಪದ್ಮಭೂಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಗಣರಾಜ್ಯೋತ್ಸವದ ಮುನ್ನಾದಿನದಂದು ಕೇಂದ್ರ ಸರ್ಕಾರವು ಪದ್ಮವಿಭೂಷಣ ಸೇರಿದಂತೆ 2026ನೇ ಸಾಲಿನ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿತ್ತು.
ಮೇ 25ರಂದು ನಡೆದ ಮೊದಲ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುರ್ಮು ಅವರು ಎರಡು ಪದ್ಮವಿಭೂಷಣ, ಆರು ಪದ್ಮಭೂಷಣ ಮತ್ತು 57 ಪದ್ಮಶ್ರೀ ಸೇರಿದಂತೆ ಒಟ್ಟು 65 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದರು.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ.
ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಮತ್ತು ತಂತ್ರಜ್ಞಾನ, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆಗಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಈ ಬಾರಿ ಪ್ರಶಸ್ತಿ ಪುರಸ್ಕೃತರಲ್ಲಿ 19 ಮಹಿಳೆಯರು ಮತ್ತು ಆರು ಮಂದಿ ಅನಿವಾಸಿ ಭಾರತೀಯರು ಸೇರಿದ್ದಾರೆ. 16 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಹಲವಾರು ಬುಡಕಟ್ಟು ಜನಾಂಗದವರು, ಸಾಂಪ್ರದಾಯಿಕ ಔಷಧಿ ನೀಡುವವರು, ಕಲಾ ಸಾಧಕರು ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.

