ನವದೆಹಲಿ: ರಷ್ಯಾ ನಿರ್ಮಿತ ಆಂಟೊನೊವ್ 'ಎನ್-32' ಸೇನಾ ಸಾರಿಗೆ ವಿಮಾನವು ಅಸ್ಸಾಂನ ಜೋರ್ಹಾಟ್‌ನಲ್ಲಿ ಶನಿವಾರ ಪತನಗೊಂಡಿದ್ದು, ಭಾರತೀಯ ವಾಯುಪಡೆಯ (ಐಎಎಫ್) ಐವರು ಸಿಬ್ಬಂದಿ ಮೃತಪಟ್ಟಿದ್ದಾರೆ.
ವಿಮಾನ ಪತನಗೊಳ್ಳುತ್ತಿದ್ದಂತೆಯೇ ಭಾರಿ ಸ್ಫೋಟ ಸಂಭವಿಸಿ ದಟ್ಟ ಹೊಗೆ ಆವರಿಸಿಕೊಂಡಿತು.
ದುರಂತ ಸಂಭವಿಸಿದ ತಕ್ಷಣವೇ ಇಡೀ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. ರಕ್ಷಣಾ ತಂಡದವರು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ಕೈಗೊಂಡರು.
ಬೆಳಿಗ್ಗೆ 10 ಗಂಟೆ ವೇಳೆಗೆ ನಿಯಮಿತ ಹಾರಾಟ ಮುಗಿಸಿ ಜೋರ್ಹಾಟ್ ನಗರದಿಂದ 7 ಕಿ.ಮೀ. ದೂರದಲ್ಲಿರುವ ರೋರಿಯಾದ ವಾಯುನೆಲೆಯಲ್ಲಿ ಕೆಳಗಿಳಿಯುವ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಐಎಎಫ್ ತಿಳಿಸಿದೆ.
'ವಿಮಾನವು ನಿಯಂತ್ರಣ ಕಳೆದುಕೊಂಡು ರನ್‌ವೇಯಿಂದ ಜಾರಿ, ಸಮಾನಾಂತರವಾದ ಟ್ಯಾಕ್ಸಿವೇ ನಲ್ಲಿ ಹಾದುಹೋಗಿ ಎರಡು ಭಾಗಗಳಾಗಿ ಛಿದ್ರವಾಗಿ ಬೆಂಕಿ ಹೊತ್ತಿಕೊಂಡಿತು' ಎಂದು ಮೂಲಗಳು ತಿಳಿಸಿವೆ. 'ಎಎನ್-32' ಪತನಗೊಂಡು ಐವರು ಸಿಬ್ಬಂದಿ ಮೃತಪಟ್ಟಿದ್ದಕ್ಕೆ ಭಾರತೀಯ ವಾಯುಪಡೆಯು ತೀವ್ರ ವಿಷಾದ ವ್ಯಕ್ತಪಡಿಸುತ್ತದೆ' ಎಂದು ವಾಯುಪಡೆಯು ಪ್ರಕಟಣೆಯಲ್ಲಿ ತಿಳಿಸಿದೆ.
'ಅಪಘಾತಕ್ಕೆ ಕಾರಣ ತಿಳಿಯಲು ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ' ಎಂದು ಹೇಳಿದೆ.
ಮೃತರನ್ನು ಸ್ಕ್ವಾಡ್ರನ್ ಲೀಡರ್ ಪ‍್ರಶಾಂತ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಶುಭಂಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ ಖೇಮಾರಾಮ್ ಕುಮಾವತ್, ಅಗ್ನಿವೀರ್ ಡ್ಯಾನೀಶ್ ಆಲಂ ಎಂದು ಗುರುತಿಸಲಾಗಿದೆ. ಸಹ ಪೈಲಟ್ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

