ನವದೆಹಲಿ: ಅನಧಿಕೃತ ಗೈರುಹಾಜರಿಗೆ ಸೂಕ್ತವಾದ ದಾಖಲೆಗಳನ್ನು ಒದಗಿಸದೇ ಇದ್ದಲ್ಲಿ ಉದ್ಯೋಗಿಯೊಬ್ಬರನ್ನು ಸೇವೆಯಿಂದ ವಜಾ ಮಾಡುವುದು ನಿಯಮ ಬಾಹಿರವಲ್ಲ ಎಂದು ಸುಪ್ರೀಂ ಕೋರ್ಟ್ ಶನಿವಾರ ಮಹತ್ವದ ಆದೇಶ ನೀಡಿದೆ.
ಕಾನೂನು ಬಾಹಿರ ವಜಾ ಎನ್ನುವುದನ್ನು ಸಾಬೀತು ಮಾಡುವ ದಾಖಲೆಗಳು, ಸೂಚನೆಗಳ ಸಾಕ್ಷ್ಯವನ್ನು ಉದ್ಯೋಗಿ ಒದಗಿಸಲು ವಿಫಲವಾದಲ್ಲಿ ವಜಾ ಕ್ರಮ ನಿಯಮಬಾಹಿರ ಎಂದು ಪರಿಗಣಿಸಲಾಗದು ಎಂದು ಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು ಇದ್ದ ಪೀಠವು ರಿಫಿಲಿಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿತು.
ಅರ್ಜುನ್ ಗುಪ್ತ ಎಂಬುವರಿಗೆ ಸಂಬಂಧಿಸಿ 2024ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶದ ರದ್ದು ಕೋರಿ ಕಂಪನಿ ಮೇಲ್ಮನವಿ ಸಲ್ಲಿಸಿತ್ತು.
ಕಂಪನಿಯ ಉದ್ಯೋಗಿ ಅರ್ಜುನ್ ಗುಪ್ತ ಅವರನ್ನು ಶೇ 50ರಷ್ಟು ವೇತನ ಪಾವತಿಯೊಂದಿಗೆ ಮರುನಿಯುಕ್ತಿ ಮಾಡಿಕೊಳ್ಳುವಂತೆ ಕಾರ್ಮಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿತ್ತು.
ಅರ್ಜುನ್ ಗುಪ್ತ ಅವರು 2012ರ ಮೇ 14ರಿಂದ ಲಿಖಿತ ಅನುಮತಿ ಪಡೆಯದೆ ಕೆಲಸಕ್ಕೆ ಗೈರಾಗಿದ್ದನ್ನು ಹಾಗೂ ಮರುನಿಯುಕ್ತಿ ವೇಳೆ ಸೂಕ್ತ ದಾಖಲೆ ಸಲ್ಲಿಸದೆ ಇರುವುದನ್ನು ಪೀಠ ಪರಿಗಣಿಸಿತು. ಕಾರ್ಮಿಕ ನ್ಯಾಯಾಲಯ ಮತ್ತು ಹೈಕೋರ್ಟ್ ತಪ್ಪಾಗಿ ಗ್ರಹಿಸಿವೆ ಎಂದು ಅಭಿಪ್ರಾಯಪಟ್ಟಿತು.
ಅನಾರೋಗ್ಯ ತಾಯಿಯ ಆರೈಕೆಗಾಗಿ ಹಿರಿಯ ಅಧಿಕಾರಿಗೆ ಮೌಖಿಕವಾಗಿ ತಿಳಿಸಿ ರಜೆ ಪಡೆದಿದ್ದೆ. ಮತ್ತೆ ಕೆಲಸಕ್ಕೆ ಬಂದಾಗ ಕಂಪನಿ ಸೇರಿಸಿಕೊಳ್ಳಲಿಲ್ಲ' ಎಂದು ಅರ್ಜುನ್ ಗುಪ್ತ ವಾದಿಸಿದ್ದರು.
ಅನಧಿಕೃತ ಗೈರಿನ ಬಗ್ಗೆ ಗುಪ್ತ ಅವರ ನಿವಾಸಕ್ಕೆ ನೋಟಿಸ್ ಕಳಿಸಲಾಗಿತ್ತು. ಆದರೆ ಅವರು ಆ ವಿಳಾಸದಲ್ಲಿ ಇರಲಿಲ್ಲ ಎಂದು ಕಂಪನಿ ಸಮಜಾಯಿಷಿ ನೀಡಿತ್ತು.

