ನವದೆಹಲಿ: ದೇಶದ(India) ಕೋಟ್ಯಂತರ ಉದ್ಯೋಗಿಗಳಿಗೆ(Employees) ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಮಹತ್ವದ ಸಿಹಿ ಸುದ್ದಿಯೊಂದನ್ನು ನೀಡಿದೆ. ಭವಿಷ್ಯ ನಿಧಿ ಸದಸ್ಯರ ಖಾತೆಗಳಿಗೆ ಶೀಘ್ರದಲ್ಲೇ ಬಡ್ಡಿ ಮೊತ್ತ (PF Intrest) ಜಮೆಯಾಗುವ ಪ್ರಕ್ರಿಯೆ ಆರಂಭವಾಗಲಿದೆ.
ಕೇಂದ್ರ ಹಣಕಾಸು ಸಚಿವಾಲಯವು 2025-26ರ ಹಣಕಾಸು ವರ್ಷದ ಪಿಎಫ್ ಠೇವಣಿಗಳ ಮೇಲೆ ಶೇಕಡಾ 8.25 ರಷ್ಟು ಬಡ್ಡಿದರಕ್ಕೆ ಅಧಿಕೃತ ಅನುಮೋದನೆ ನೀಡಿದ್ದು, ಈ ತಿಂಗಳ ಅಂತ್ಯದೊಳಗೆ ಹಣ ವರ್ಗಾವಣೆ ಕಾರ್ಯ ಶುರುವಾಗುವ ಸಾಧ್ಯತೆಯಿದೆ. ಮುಂಬರುವ ಜುಲೈ(July) ವೇಳೆಗೆ ಎಲ್ಲಾ ಅರ್ಹ ಸದಸ್ಯರ ಖಾತೆಗಳಿಗೆ ಬಡ್ಡಿ ಮೊತ್ತವನ್ನು ತಲುಪಿಸುವ ಗುರಿಯನ್ನು ಇಪಿಎಫ್‌ಒ ಹೊಂದಿದೆ.
ಇಪಿಎಫ್‌ಒ ಈಗಾಗಲೇ ಬಡ್ಡಿದರವನ್ನು ನಿಗದಿಪಡಿಸಿದ್ದು, ಸತತ ಮೂರನೇ ವರ್ಷವೂ ಶೇಕಡಾ 8.25 ರಷ್ಟು ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಸಾಮಾನ್ಯವಾಗಿ ಸದಸ್ಯರ ಮಾಸಿಕ ಪಿಎಫ್ ಶೇಷದ (ಮಂತ್ಲಿ ಬ್ಯಾಲೆನ್ಸ್) ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ. ಆದರೆ ಇಡೀ ಹಣಕಾಸು ವರ್ಷದ ಒಟ್ಟು ಬಡ್ಡಿ ಮೊತ್ತವನ್ನು ವರ್ಷದ ಅಂತ್ಯದಲ್ಲಿ ಒಮ್ಮೆಯೇ ಖಾತೆಗೆ ಜಮಾ ಮಾಡಲಾಗುತ್ತದೆ.
ಮನೆಯಲ್ಲೇ ಕುಳಿತು ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ?
1. ಎಸ್‌ಎಂಎಸ್ (SMS) ಮೂಲಕ ಬ್ಯಾಲೆನ್ಸ್ ಪಡೆಯಿರಿ
ನಿಮ್ಮ ಖಾತೆಗೆ ಬಡ್ಡಿ ಹಣ ಜಮೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಯುಎಎನ್ (UAN) ಪೋರ್ಟಲ್, ಉಮಂಗ್ (UMANG) ಮೊಬೈಲ್ ಆಯಪ್ ಸೇರಿದಂತೆ ಹಲವು ಡಿಜಿಟಲ್ ಮಾರ್ಗಗಳ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಅದರಲ್ಲಿ ಅತ್ಯಂತ ಸರಳವಾದ ಎರಡು ವಿಧಾನಗಳು ಇಲ್ಲಿವೆ.
ನಿಮ್ಮ ಇಪಿಎಫ್‌ಒ ಖಾತೆಗೆ ಲಿಂಕ್ ಆಗಿರುವ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ EPFOHO UAN ENG ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಸಂದೇಶ ಕಳುಹಿಸಬೇಕು (ಕೊನೆಯಲ್ಲಿರುವ ENG ಎಂದರೆ ಇಂಗ್ಲಿಷ್ ಭಾಷೆ ಎಂದರ್ಥ. ಪ್ರಾದೇಶಿಕ ಭಾಷೆ ಬೇಕಿದ್ದಲ್ಲಿ ಬದಲಾಯಿಸಬಹುದು).
ಉದಾಹರಣೆಗೆ: ನಿಮ್ಮ ಯುಎಎನ್ ಸಂಖ್ಯೆ 123456789012 ಆಗಿದ್ದರೆ, ನೀವು EPFOHO 123456789012 ENG ಎಂದು ಟೈಪ್ ಮಾಡಿ ಎಸ್‌ಎಂಎಸ್ ಕಳುಹಿಸಬೇಕು. ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಯ ಸಂಪೂರ್ಣ ವಿವರಗಳು ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸಲಿವೆ.
2. ಮಿಸ್ಡ್ ಕಾಲ್ ಮೂಲಕ ಉಚಿತ ಮಾಹಿತಿ
ಇನ್ನು, ಇಂಟರ್ನೆಟ್ ಇಲ್ಲದೆಯೂ ಪಿಎಫ್ ಬ್ಯಾಲೆನ್ಸ್ ತಿಳಿಯಲು ಇಪಿಎಫ್‌ಒ ಮಿಸ್ಡ್ ಕಾಲ್ ಸೌಲಭ್ಯ ನೀಡಿದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9966044425 ಸಂಖ್ಯೆಗೆ ಕರೆ ಮಾಡಬೇಕು. ಎರಡು ಮೂರು ರಿಂಗ್ ಆದ ಬಳಿಕ ಕರೆ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ. ತಕ್ಷಣವೇ ನಿಮ್ಮ ಮೊಬೈಲ್‌ಗೆ ಇಪಿಎಫ್‌ಒ ಕಡೆಯಿಂದ ಒಂದು ಎಸ್‌ಎಂಎಸ್ ಬರಲಿದ್ದು, ಅದರಲ್ಲಿ ನಿಮ್ಮ ಖಾತೆಯ ಕೊನೆಯ ಬ್ಯಾಲೆನ್ಸ್ ಹಾಗೂ ಬಡ್ಡಿಯ ವಿವರಗಳು ಇರಲಿವೆ.

