ನವದೆಹಲಿ (PTI): 'ಸರ್ಕಾರ ಮತ್ತು ನಿಯಂತ್ರಿತ ಘಟಕಗಳು ನಾಗರಿಕರೊಂದಿಗೆ ಸಂವಹನ ಉದ್ದೇಶಕ್ಕಾಗಿ ಬಳಸುವ 1600 ಸಂಖ್ಯೆ ಸರಣಿಯಿಂದ ಬರುವ ದೂರವಾಣಿ ಕರೆಗಳನ್ನು ಯಾವುದೇ ಆಯಪ್‌ಗಳು ನಿರ್ಬಂಧಿಸಲು (ಬ್ಲಾಕ್) ಸಾಧ್ಯವಿಲ್ಲ' ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಿಳಿಸಿದೆ.
ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಷನ್ಸ್ ಕಸ್ಟಮರ್ ಪ್ರಿಫರೆನ್ಸ್ ರೆಗ್ಯುಲೇಷನ್ಸ್ (ಟಿಸಿಸಿಸಿಪಿಆರ್) ಅಡಿ 1600 ಸಂಖ್ಯೆಯ ಸರಣಿಯಿಂದ ಬರುವ ಕರೆಗಳನ್ನು ಟ್ಯಾಗ್ ಮಾಡುವುದು, ನಿರ್ಬಂಧಿಸುವುದು ಅಥವಾ ಫಿಲ್ಟರ್ ಮಾಡುವುದನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.
ಆರ್‌ಬಿಐ, ಸೆಬಿ, ಐಆರ್‌ಡಿಎಐ, ಪಿಎಫ್‌ಆರ್‌ಡಿಎ ನಿಯಂತ್ರಿಸುವ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಸಂಸ್ಥೆಗಳು ತಮ್ಮ ಗ್ರಾಹಕರೊಂದಿಗೆ ಮತ್ತು ಸರ್ಕಾರವು ನಾಗರಿಕರೊಂದಿಗೆ ಸಂಪರ್ಕಿಸಲು 1600 ಸಂಖ್ಯೆ ಸರಣಿಯನ್ನು ಬಳಸುತ್ತವೆ. ಈ ಸರಣಿಯಿಂದ ಬರುವ ಕರೆಗಳು ನಾಗರಿಕರಿಗೆ ವಿಶ್ವಾಸಾರ್ಹ ಆಗಿರುತ್ತವೆ ಎಂದು ತಿಳಿಸಿದೆ.
ಗ್ರಾಹಕರು 140 ಸಂಖ್ಯೆ ಸರಣಿಯಿಂದ ಬರುವ ಯಾವುದೇ ಪ್ರಚಾರ ಕರೆಗಳನ್ನು ಡಿಎನ್‌ಡಿ (ಡು ನಾಟ್ ಡಿಸ್ಟರ್ಬ್) ರಿಜಿಸ್ಟ್ರಿಯಲ್ಲಿ ತಮ್ಮ ಆದ್ಯತೆಯನ್ನು ನೋಂದಾಯಿಸುವ ಮೂಲಕ ಅನುಮತಿಸುವ ಅಥವಾ ನಿರ್ಬಂಧಿಸುವ ಹಕ್ಕನ್ನು ಹೊಂದಿರುತ್ತಾರೆ ಎಂದು ಸ್ಪಷ್ಟಪಡಿಸಿದೆ.
ಟ್ರಾಯ್ ಆದೇಶವನ್ನು ಉಲ್ಲಂಘಿಸಿ, ಜನರನ್ನು ಗುರಿಯಾಗಿಸಲು ಸ್ಪ್ಯಾಮರ್‌ಗಳು 1600 ಮತ್ತು 140ರಿಂದ ಪ್ರಾರಂಭವಾಗುವ ಫೋನ್ ಸಂಖ್ಯೆಗಳನ್ನು ಬಳಸುತ್ತಾರೆ ಎಂದು ಟ್ರೂಕಾಲರ್‌ನ ಸಿಇಒ ರಿಶಿತ್ ಜುಂಜುನ್‌ವಾಲಾ ಹೇಳಿದ್ದಾರೆ. ಟ್ರೂಕಾಲರ್ ಬಳಕೆದಾರರು ಈ ಸಂಖ್ಯೆಗಳಿಂದ ಪ್ರತಿದಿನ ಬರುವ 5.25 ಲಕ್ಷ ಕರೆಗಳನ್ನು ಸ್ಪ್ಯಾಮ್ ಎಂದು ನಿರ್ಬಂಧಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

