ಡೆಹ್ರಾಡೂನ್: ಉತ್ತರಾಖಂಡದಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೇವಲ 17 ದಿನಗಳ ಹಿಂದೆ ಉದ್ಘಾಟನೆಯಾಗಿದ್ದ ಡೆಹ್ರಾಡೂನ್ ಸೇತುವೆಯನ್ನು ಸಂಪರ್ಕಿಸುವ ರಸ್ತೆ ಕುಸಿದಿರುವ ಘಟನೆ ನಡೆದಿದೆ. ಈ ಸಂಪರ್ಕ ರಸ್ತೆಯನ್ನು ಟನ್ಸ್ ನದಿಗೆ ಅಡ್ಡಲಾಗಿ ಪ್ರೇಮ್ ನಗರ್ ನಲ್ಲಿನ ನಂದ ಕಿ ಚೌಕಿ ಬಳಿ ನಿರ್ಮಿಸಲಾಗಿದ್ದು, ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು ಎಂದು ವರದಿಯಾಗಿದೆ.
ಸಂಪರ್ಕ ರಸ್ತೆ ಕುಸಿದಿರುವುದರಿಂದ, ಡೆಹ್ರಾಡೂನ್-ಪವೋಂತಾ ಸಾಹಿಬ್ ಹೆದ್ದಾರಿಯಲ್ಲಿ ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಳೆದ ವರ್ಷದ ಮುಂಗಾರಿನಲ್ಲಿ ಕೊಚ್ಚಿ ಹೋಗಿದ್ದ ರಸ್ತೆಗೆ ಬದಲಿಯಾಗಿ ನಿರ್ಮಿಸಲಾಗಿರುವ ಈ ಸಂಪರ್ಕ ರಸ್ತೆಯನ್ನು ಜುಲೈ 12ರಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಈ ರಸ್ತೆ ರಚನಾತ್ಮಕವಾಗಿ ಸುರಕ್ಷಿತವಾಗಿದ್ದು, ಸೇತುವೆಯನ್ನು ಸಂಪರ್ಕಿಸುವ ರಸ್ತೆಯ ಭಾಗ ಮಾತ್ರ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಾಜ್ಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ 24x7 ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಲಾಗಿದ್ದು, ಮರು ನಿರ್ಮಾಣ ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ಡೆಹ್ರಾಡೂನ್ ಜಿಲ್ಲಾಧಿಕಾರಿ ಆಶಿಶ್ ಚೌಹಾಣ್ ತಿಳಿಸಿದ್ದಾರೆ.
"ಸೇತುವೆ ಸುಭದ್ರವಾಗಿದೆ. ಸೇತುವೆಯತ್ತ ಸಾಗುವ ಸಂಪರ್ಕ ರಸ್ತೆಯ ಭಾಗಕ್ಕೆ ಮಾತ್ರ ಹಾನಿಯಾಗಿದ್ದು, ಯಥಾಸ್ಥಿತಿಯನ್ನು ಮರುಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ" ಎಂದು ಅವರು ಹೇಳಿದ್ದಾರೆ.
ಈ ಘಟನೆಯಿಂದ ಡೆಹ್ರಾಡೂನ್, ವಿಕಾಸ್ ನಗರ್ ಹಾಗೂ ನೆರೆಯ ಹಿಮಾಚಲ ಪ್ರದೇಶದ ನಡುವಿನ ಸಾರಿಗೆ ಸಂಚಾರ ವ್ಯತ್ಯಯಗೊಂಡಿದೆ.

