ಕುಂಬಳೆ: ತರವಾಡು ಕ್ಷೇತ್ರಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ಸ್ಕೂಟರಲ್ಲಿ ಆಗಮಿಸಿದ ತಂಡವೊಂದು ದಾರಿಮಧ್ಯೆ ತಡೆದು ನಿಲ್ಲಿಸಿ ಹಲ್ಲೆಗೈದು 43,500 ರೂಪಾಯಿ ನಗದು ಹೊಂದಿದ್ದ ಬ್ಯಾಗ್ ಕಸಿದು ಪರಾರಿಯಾಗಿದೆ. ಕಟ್ಟತ್ತಡ್ಕ ಎಡನಾಡು ನಿವಾಸಿ ಈಶ್ವರ(62)ದರೋಡೆಗೊಳಗಾದವರು.
ಪೆರ್ಮುದೆಯ ಮುನ್ನೂರು ಹೊಸಮನೆ ತರವಾಡು ಕ್ಷೇತ್ರದ ಪರಾಧಿಕಾರಿಯಾಗಿರುವ ಈಶ್ವರ ಅವರು ಮುನ್ನೂರಿನಲ್ಲಿ ಬಸ್ಸಿಳಿದು ತರವಾಡು ಕ್ಷೇತ್ರದತ್ತ ನಡೆದುಹೋಗುವ ಮಧ್ಯೆ ಸ್ಕೂಟರಲ್ಲಿ ಆಗಮಿಸಿದ ತಂಡ, ತಡೆಉ ಹಲ್ಲೆ ನಡೆಸಿ, ಕೈಯಲ್ಲಿದ್ದ ನಗದುಹೊಂದಿದ ಬ್ಯಾಗ್ ಕಸಿದು ಪರಾರಿಯಾಗಿದೆ. ಬೊಬ್ಬಿಡುತ್ತಿದ್ದಂತೆ ಸ್ಥಳೀಯರು ಆಗಮಿಸಿದ್ದು, ನಂತರ ಕುಂಬಳೆ ಠಾಣೆಗೆ ತೆರಳಿ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿ ಸನಿಹದ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದ್ದಾರೆ.


